ಚಿಕ್ಕಬಳ್ಳಾಪುರ: ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸಿದ್ರು ಅನ್ನೋ ಹಾಗೆ ಎಚ್.ಎನ್ ವ್ಯಾಲಿ ಯೋಜನೆಯ ನೀರು ಜಿಲ್ಲೆಗೆ ಬರುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ರೈತನೋರ್ವ ಕೊಳಚೆ ನೀರಿಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದಾನೆ.
ಎಚ್‍ಎನ್ ವ್ಯಾಲಿ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಆದರೆ ಇನಮಿಂಚೇನಹಳ್ಳಿ ಬಳಿ ರೈತ ನಾರಾಯಣಪ್ಪ ಎಂಬಾತ ಬೃಹತ್ ಗಾತ್ರದ ಪೈಪ್‍ಗೆ ಕನ್ನ ಕೊರೆದು ಪ್ಲಾಸ್ಟಿಕ್ ಪೈಪ್ ಆಳವಡಿಸಿ, ತನ್ನ ದ್ರಾಕ್ಷಿ ಬೆಳೆ ಇರುವ ಜಮೀನಿಗೆ ಕೊಳಚೆ ನೀರು ಹರಿಸಿಕೊಳ್ಳಲು ಮುಂದಾಗಿದ್ದಾನೆ.
ಇತ್ತ ನೀರಿನ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್ ಕೋಲಾರದ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆಯ ನೀರನ್ನ ಜಿಲ್ಲೆಗಳಿಗೆ ಹರಿಸದಂತೆ ತಾಕೀತು ಮಾಡಿದೆ. ಆದರೂ ಯಾವುದಾದ್ರೂ ಪರವಾಗಿಲ್ಲ, ಒಟ್ಟಿನಲ್ಲಿ ನೀರು ಸಿಕ್ರೆ ಸಾಕು ಅನ್ನೋ ಮನಸ್ಥಿತಿಯಲ್ಲಿರುವ ರೈತ ಕೊಳಚೆ ನೀರನ್ನೇ ಜಮೀನಿಗೆ ಹರಿಸಲು ಮುಂದಾಗಿದ್ದಾನೆ. ಇದು ರೈತರ ನೀರಿನ ಕೊರತೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.