ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ- ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈತ ಪ್ರಶ್ನೆ

Public TV
2 Min Read

ಬೀದರ್: ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ರೈತರೊಬ್ಬರು ಪ್ರಶ್ನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ನ ಭದ್ರಕೋಟೆ ಎಂದು ಕರೆಯಲ್ಪಡುವ ಹುಮ್ನಾಬಾದ್ ಗೆ ಭಾನುವಾರ ತೆರಳಿ ಪ್ರಸಿದ್ಧ ವಿರಭದ್ರೇಶ್ವರ್ ದೇವರ ದರ್ಶನ ಪಡೆದ ಶಾ, ಬಳಿಕ ಆವರಣದಲ್ಲಿ ಆಯೋಜನೆ ಮಾಡಿದ್ದ ಕಬ್ಬು ಬೆಳೆಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಈ ವೇಳೆ ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ ಅಂತ ರೈತರೊಬ್ಬರು ಅಮಿತ್ ಶಾ ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ರೈತನ ಕೈಯಲ್ಲಿದ್ದ ಮೈಕ್ ನ್ನು ಬಿಜೆಪಿ ಮುಖಂಡ ಕಿತ್ತುಕೊಂಡಿದ್ದಾರೆ. ರೈತನ ಕೈಯಿಂದ ಮೈಕ್ ಕಿತ್ಕೊಂಡ ಬೆನ್ನಲ್ಲೇ ಅಮಿತ್ ಶಾ ಸಂವಾದ ಕಾರ್ಯಕ್ರಮದಲ್ಲಿ ಗದ್ದಲವೇ ಉಂಟಾಯಿತು.

ಈ ಸಂದರ್ಭ ಅಮಿತ್ ಶಾ ಅವರು, ಹೀಗೆಲ್ಲಾ ಮಾತಾಡ್ಬೇಡಿ, ಎಲ್ಲರೂ ದಯವಿಟ್ಟು ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡ್ರು. ಪರಿಸ್ಥಿತಿ ತಿಳಿಗೊಳಿಸಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಹೈರಾಣರಾಗಿದ್ರು ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಬಳಿಕ ಭಾಷಣ ಮಾಡಿದ ಅಮಿತ್ ಶಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಹುಲ್ ಉದ್ಯಮಿಗಳ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗೇನಾದ್ರು ದಾಖಲೆಗಳು ಇದ್ರೆ ಪ್ರೂವ್ ಮಾಡಲಿ. ನಾನು ರೈತರ ಮುಂದೆ ತಲೆ ಬಾಗುತ್ತೆನೆ ಎಂದು ವಾಗ್ದಾಳಿ ನಡೆಸಿದ್ರು. 2018ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ, 90 ದಿನಗಳಲ್ಲಿ ಕಬ್ಬಿನ ಬಾಕಿ ಹಣ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ರು.

ಬೀದರ್ ನಗರದ ಸಿಖ್ಖರ ಪವಿತ್ರ ದೇವಸ್ಥಾನಕ್ಕೆ ಅಮಿತ್ ಶಾ ಹಾಗೂ ಪತ್ನಿ ಭೇಟಿ ನೀಡಿ ಗುರುನಾನಕರ ದರ್ಶನ ಪಡೆದ ಸಿಖ್ ಧರ್ಮಿಯರ ಮನಸ್ಸು ಗೆಲುವ ಯತ್ನ ಮಾಡಿದ್ರು. ನಂತರ ಮನ್ನಾಏಖೇಳ್ಳಿಯಲ್ಲಿರುವ ಬೌದ್ಧ ವಿಹಾರಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಇನ್ನು ಒಂದೇ ಗ್ರಾಮದಲ್ಲಿ ಮೂರು ಜನ ರೈತರು ಅತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಚಂದ್ರಪ್ಪ ಧನ್ನಕರ್ ರೈತನ ಪತ್ನಿ ಭಾಗಮ್ಮ ಶಾ ಮುಂದೆ ಕಣ್ಣೀರು ಹಾಕಿದ ಪ್ರಸಂಗ ಕೂಡಾ ನಡೆಯಿತು.

ಸಂಸದ ಭಗವಂತ್ ಖೂಬಾ, ಶಾಸಕ ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಸೇರಿದಂತೆ ಪಕ್ಷದ ಕೆಲವು ಮುಖಂಡರು ಭಾಗಿಯಾಗಿದ್ದರು.

https://twitter.com/KtakaCongress/status/967765129155698688

Share This Article
Leave a Comment

Leave a Reply

Your email address will not be published. Required fields are marked *