ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

Public TV
2 Min Read

ಹೈದರಾಬಾದ್: ಬೆಳೆ ಹಾಳಾಗುವುದನ್ನು ತಡೆಯಲು ಜಮೀನಿನಲ್ಲಿ ರೈತರೊಬ್ಬರು ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು, ಈ ಪ್ರಯೋಗ ಈಗ ಯಶಸ್ವಿಯಾಗಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 30 ವರ್ಷದ ರೈತ ಅನ್ವರ್ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಜಮೀನಿನಲ್ಲಿ ಶ್ರಮ ಹಾಕಿ ತರಕಾರಿ ಬೆಳೆ ಚೆನ್ನಾಗಿ ಬಂದರೂ ಕೊನೆ ಹಂತದಲ್ಲಿ ಒಣಗಿ ಹೋಗುತ್ತಿತ್ತು.

ಬೆಳೆ ಒಣಗುತ್ತಿರುವುದು ಯಾಕೆ ಎಂದು ಮನಸ್ಸಿನಲ್ಲೇ ಪ್ರಶ್ನಿಸಿದಾಗ, ರಸ್ತೆಯಲ್ಲಿ ಹೋಗುವ ಮಂದಿ ಪದೇ ಪದೇ ತನ್ನ ಜಮೀನಿನತ್ತ ನೋಡುವುದರಿಂದ ದೃಷ್ಟಿ ತಾಗಿ ಬೆಳೆ ಒಣಗುತ್ತಿದೆ ಎನ್ನುವ ಉತ್ತರ ಅನ್ವರ್ ಅವರಿಗೆ ಸಿಕ್ಕಿದೆ.

ಈ ಸಮಸ್ಯೆಗೆ ಪರಿಹಾರ ಏನು ಎಂದು ಆಲೋಚಿಸುತ್ತಿದ್ದಾಗ ಅವರಿಗೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದರೆ ಹೇಗೆ ಎನ್ನುವ ಉಪಾಯ ಹೊಳೆದಿದೆ. ಐಡಿಯಾ ಹೊಳೆದಿದ್ದೆ ತಡ ಜಮೀನಿನ ಮಧ್ಯದಲ್ಲಿ ನೆಚ್ಚಿನ ನಟಿ ಕಾಜರ್ ಅಗರ್‍ವಾಲ್ ಕಟೌಟ್ ಹಾಕಿದ್ದಾರೆ. ಮೊದಲೆಲ್ಲ ಬೆಳೆಗಳನ್ನು ನೋಡುತ್ತಿದ್ದ ಜನ ಈಗ ಕಟೌಟ್ ನೋಡುತ್ತಿದ್ದಾರೆ. ಹೀಗಾಗಿ ಈಗ ಜಮೀನಿನ ಮೇಲೆ ಕೆಟ್ಟ ದೃಷ್ಟಿ ಬೀಳದ ಕಾರಣ ಬೆಳೆ ಒಣಗುತ್ತಿಲ್ಲ ಎಂದು ಅನ್ವರ್ ಹೇಳಿದ್ದಾರೆ.

ಹೊಲದಲ್ಲಿ ಕೆಲ ದಿನಗಳ ಹಿಂದೆ ಕಾಜಲ್ ಅಗರ್ವಾಲ್  ಅವರ ಎರಡು ಕಟೌಟ್ ಗಳನ್ನು ನಿಲ್ಲಿಸಿದ್ದೇನೆ. ಈಗ ಬೆಳೆಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದೇನೆ. ಮೊದಲು ಬೆಳೆಗಳು ಒಣಗಿ ಹೋಗುತ್ತಿದ್ದವು. ಇದರಿಂದ ನಾನು ಹಾಕಿದ ಸಾಕಷ್ಟು ಹಣ ಹಾಗೂ ಶ್ರಮ ನಷ್ಟವಾಗುತ್ತಿತ್ತು. ಆದರೆ ಕಾಜಲ್ ಅಗರ್ವಾಲ್  ಕಟೌಟ್ ನಿಲ್ಲಿಸಿದಾಗಿನಿಂದ ಬೆಳೆಗಳು ಚೆನ್ನಾಗಿವೆ ಅಂತಾರೆ ರೈತ ಅನ್ವರ್.

ಈಗ ಎಲ್ಲರೂ ನನ್ನ ಬೆಳೆಗಳನ್ನು ನೋಡುವುದನ್ನು ಮರೆತು ಕಟೌಟ್ ನೋಡುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳುತ್ತಿಲ್ಲ ಎಂದು ತನ್ನ ಉಪಾಯವನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಈ ವಿಚಾರವನ್ನು ನೋಡಿ ಮೊದಲು ನಗುತ್ತಿದ್ದವರೆಲ್ಲ ಇಂದು ನನ್ನ ಬೆಳೆಗಳ ಕಡೆಗೆ ನೋಡದೇ ಕಟೌಟ್‍ಗಳನ್ನೇ ನೋಡುತ್ತಿದ್ದಾರೆ ಎಂದಿದ್ದಾರೆ.

ಯಾಕೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು ಎಂದು ಪ್ರಶ್ನಿಸಿದ್ದಕ್ಕೆ, ನಾನು ಕಾಜಲ್ ಅಗರ್ವಾಲ್  ರ ದೊಡ್ಡ ಅಭಿಮಾನಿ ಎನ್ನುವುದು ನನ್ನ ತಂದೆಯವರಿಗೆ ಗೊತ್ತಿತ್ತು. ಹಾಗಾಗಿ ನನ್ನ ತಂದೆಯೇ ಕಾಜಲ್ ಅವರ ಕಟೌಟ್‍ಗಳನ್ನು ಜಮೀನಿನಲ್ಲಿ ಇಡುವಂತೆ ಸಲಹೆ ನೀಡಿದರು ಎಂದು ಅನ್ವರ್ ಉತ್ತರಿಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆನ್ನಾರೆಡ್ಡಿ ಎಂಬ ರೈತ ತನ್ನ ಜಮೀನಿಲ್ಲಿ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದಿರಲಿ ಎಂದು ಸನ್ನಿಲಿಯೋನ್ ರ ಅರೆನಗ್ನ ಕಟೌಟ್ ನ್ನು ಜಮೀನಿನಲ್ಲಿ ನಿಲ್ಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *