ನಿಖಿಲ್ ಭರ್ಜರಿ ಪ್ರಚಾರದಲ್ಲಿ ತೆನೆ ಹೊತ್ತು ವ್ಯಕ್ತಿಯಿಂದ ನೃತ್ಯ!

Public TV
1 Min Read

ಮಂಡ್ಯ: ಚುನಾವಣಾ ಜಿದ್ದಾಜಿದ್ದಿ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬರು ಹುಲ್ಲಿನ ಹೊರೆ ಹೊತ್ತು ನೃತ್ಯ ಮಾಡಿದ್ದಾರೆ.

ಮಳವಳ್ಳಿ ತಾಲೂಕಿನ, ಚಿಕ್ಕಮುಲಗೂಡು ಗ್ರಾಮದಿಂದ ಪ್ರಚಾರ ಆರಂಭಿಸಿದ ನಿಖಿಲ್‍ಗೆ ಸಚಿವ ಜಿ.ಟಿ.ದೇವೇಗೌಡ, ಶಾಸಕ ಅನ್ನದಾನಿ ಸಾಥ್ ನೀಡಿದ್ರು. ಪ್ರಚಾರದ ವೇಳೆ ದ್ವಾರನಹಳ್ಳಿ ಗ್ರಾಮದ ನಾಗಣ್ಣ, ವಾಹನದ ಮುಂದೆ ತೆನೆ ಹೊತ್ತು ನೃತ್ಯ ಮಾಡಿದ್ದು ನೆರೆದಿದ್ದವರ ಗಮನ ಸೆಳೆಯಿತು.

ಚಿಕ್ಕಮುಲಗೂಡು ಗ್ರಾಮದಲ್ಲಿ ಮಾತನಾಡಿದ ನಿಖಿಲ್, ತುಂಬಾ ಚೆನ್ನಾಗಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಅಂದ್ರು. ಇದೇ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಯಶ್, ದರ್ಶನ್ ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿದೆ. ಅದನ್ನು ನಾನು ಯಾಕೆ ಪ್ರಶ್ನೆ ಮಾಡಲಿ. ಎಲ್ಲರಿಗೂ ಒಳ್ಳೆಯದಾಗಲಿ. ದರ್ಶನ್, ಯಶ್ ಅಭಿಮಾನಿಗಳು ಬರುತ್ತಾರೆ. ಅದರಿಂದ ನಮಗೇನೂ ಹಿನ್ನಡೆಯಾಗಲ್ಲ ಎಂದು ಹೇಳಿದ್ರು.

ಜಿಲ್ಲೆಯ ಅಭಿವೃದ್ಧಿ ಮುಖ್ಯ:
ಸಂಸದ ಶಿವರಾಮೇಗೌಡರು ಸುಮಲತಾ ಗೌಡ್ತಿ ಅಲ್ಲ, ನಾಯ್ಡು ಎಂದು ಹೇಳಿದ ವಿಚಾರದ ಬಗ್ಗೆ ಕೂಡ ನಾನು ಮಾತನಾಡಲ್ಲ. ಆ ಬಗ್ಗೆ ಶಿವರಾಮೇಗೌಡರನ್ನೇ ಕೇಳಬೇಕು ಎಂದು ತಿಳಿಸಿದ ಅವರು, ನಾನು ಸಂಸದನಾಗಿ ಡೆಲ್ಲಿಯಲ್ಲಿ ಮೆರೆಯಲಿಕ್ಕೆ ಬಂದವನಲ್ಲ. ನಾನು ದೇವೇಗೌಡ, ಕುಮಾರಣ್ಣ ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ನಾನು ಈವರೆಗೆ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ ಅಂದ್ರು.

ದೃಷ್ಟಿ ತೆಗೆದ ಯುವತಿ:
ಇದೇ ವೇಳೆ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ಯುವತಿಯೊಬ್ಬರು ನಿಖಿಲ್‍ಗೆ ಬೆಲ್ಲದ ಆರತಿ ಮಾಡಿ ದೃಷ್ಟಿ ತೆಗೆದಿದ್ದಾರೆ. ಪ್ರಚಾರದ ನಡುವೆ ದೃಷ್ಟಿಯಾಗಿರಬಹುದೆಂದು ಯುವತಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹಿಳೆಯಿಂದ ತರಾಟೆ:
ಹಿಟ್ಟಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಹಿಳೆಯೊಬ್ಬರು ಸ್ತ್ರೀ ಶಕ್ತಿ ಸಾಲ ಮನ್ನಾ ಆಗಿಲ್ಲ ಎಂದು ನಿಖಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ನಿಖಿಲ್, ಇದೂವರೆಗೆ ಆಗಿರುವ ಸಾಲಮನ್ನಾ ಬಗ್ಗೆ ಮಾಹಿತಿ ನೀಡಿದ್ರು.

Share This Article
Leave a Comment

Leave a Reply

Your email address will not be published. Required fields are marked *