ಬ್ರಿಜ್‌ಭೂಷಣ್‌ ಬಂಧನಕ್ಕೆ ಜೂನ್‌ 9 ಗಡುವು – ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ

Public TV
1 Min Read

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (WFI) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಸುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ ನೀಡಿದೆ. ಬ್ರಿಜ್‌ ಭೂಷಣ್‌ ನನ್ನ ಜೂನ್‌ 9ರ ಒಳಗೆ ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.

ಈ ಕುರಿತು ಮಾತನಾಡಿರುವ ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait), ಬಿಜೆಪಿ ಸಂಸದನೂ ಆಗಿರುವ ಭೂಷಣ್‌ ಅಥ್ಲೀಟ್‌ಗಳಿಗೆ (Wrestlers) ಲೈಂಗಿಕ ಕಿರುಕುಳ ನೀಡಿದ್ದಾರೆ. ಡಬ್ಲ್ಯೂಎಫ್‌ಐ ಮುಖ್ಯಸ್ಥನ ಸ್ಥಾನವನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಮೇ 9ರ ಒಳಗೆ ಬ್ರಿಜ್‌ ಭೂಷಣ್‌ನನ್ನ ಬಂಧಿಸಬೇಕು. ಜೊತೆಗೆ ಕುಸ್ತಿಪಟುಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನ ಹಿಂಪಡೆಯಬೇಕು. ಇಲ್ಲದಿದ್ದರೇ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ದೇಶಾದ್ಯಂತ ಪಂಚಾಯ್ತಿ ನಡೆಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟುಗಳ ವಿರುದ್ಧ FIR; ದೇಶದಲ್ಲಿ ಸರ್ವಾಧಿಕಾರ ಆರಂಭವಾಯ್ತಾ – ಸಾಕ್ಷಿ ಮಲಿಕ್‌ ಪ್ರಶ್ನೆ

ಈ ನಡುವೆ ಕುಸ್ತಿಪಟುಗಳ ಮನವೊಲಿಸುವ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಪ್ರಯತ್ನವೂ ವಿಫಲವಾಗಿದೆ. ಅನುರಾಗ್‌ ಠಾಕೂರ್‌ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರೂ, ಅದಕ್ಕೆ ಒಪ್ಪದ ಕುಸ್ತಿಪಟುಗಳು ಭೂಷಣ್‌ ಬಂಧನವಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

ಕಳೆದ ಭಾನುವಾರ ನೂತನ ಸಂಸತ್‌ ಭವನ ಉದ್ಘಾಟನೆ ದಿನದಂದು ಕುಸ್ತಿಪಟುಗಳು ಭವನದ ಎದುರು ಪ್ರತಿಭಟನೆ ನಡೆಸಲು ಮೆರವಣಿಗೆ ಹೊರಟಿದ್ದರು. ಈ ವೇಳೆ ದೆಹಲಿ ಪೊಲೀಸರು ಅವರನ್ನು ಬ್ಯಾರಿಕೇಡ್‌ ಹಾಕಿ ತಡೆದರು. ಬ್ಯಾರಿಕೇಡ್‌ ಸರಿಸಿ ಕುಸ್ತಿಪಟುಗಳು ಮುನ್ನುಗಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಅಲ್ಲದೇ ಪ್ರಮುಖ ಕ್ರೀಡಾಪಟುಗಳ ವಿರುದ್ಧ ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಇದರಿಂದ ಬೇಸತ್ತಿದ್ದ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನ ಗಂಗಾ ನದಿಗೆ ಎಸೆಯಲು ತೆರಳಿದ್ದರು. ಬಳಿಕ ರೈತಸಂಘದ ನಾಯಕರು ಮನವೊಲಿಸಿ ಕರೆತಂದಿದ್ದರು.

Share This Article