ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ

Public TV
1 Min Read

– ಸಾಮೂಹಿಕ ವಿವಾಹ ಮಾಡಿ ಹರಕೆ ತೀರಿಸಲಿರುವ ರೈತ

ವಿಜಯಪುರ: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ನೂರಾರು ಅಡಿಗಳವರೆಗೆ ಕೊಳವೆ ಬಾವಿ ಕೊರೆದರು ನೀರು ಸಿಗದ ಪರಿಸ್ಥಿತಿ ಇದೆ. ಆದರೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಂಗಾರಗುಂಡ ಗ್ರಾಮದಲ್ಲಿ ಕೇವಲ 48 ಅಡಿ ಅಗೆದಾಗಲೇ ಬಾವಿಯಲ್ಲಿ ಗಂಗೆ ಉಕ್ಕಿ ಹೊರ ಬಂದಿದ್ದಾಳೆ.

ಹೌದು. ಅಚ್ಚರಿ ಎನಿಸಿದರು ಇದು ನಿಜ. ಬಂಗಾರಗುಂಡ ಗ್ರಾಮದ ನಿವಾಸಿ ರೈತ ಹಾಗೂ ಶಿಕ್ಷಕರಾಗಿರುವ ಬಸಪ್ಪ ಕುರೆಕನಾಳ ಅವರ ಜಮೀನಲ್ಲಿ ಕೇವಲ 48 ಅಡಿಗೆ ಗಂಗೆ ಉದ್ಬವಿಸಿದ್ದಾಳೆ. ಹೀಗಾಗಿ ಗ್ರಾಮ ದೇವರಲ್ಲಿ ಹರಕೆ ಹೊತ್ತಿದ್ದ ಬಸಪ್ಪ ಇಂದು ಬಾವಿಯ ಬಳಿಯಲ್ಲೇ 10 ಜೋಡಿಗಳ ಸಾಮೂಹಿಕ ವಿವಾಹ ಮಾಡಲಿದ್ದಾರೆ. ಈ ಬಾವಿ ತೆಗೆಯುವ ಮೊದಲು, ಬಾವಿಗೆ ನೀರು ಬಂದರೆ ಕೈಲಾದಷ್ಟು ಜೋಡಿಗಳಿಗೆ ಸಾಮೂಹಿಕ ಮದುವೆ ಮಾಡಿಸುತ್ತೇನೆ ಎಂದು ಬಸಪ್ಪ ಗ್ರಾಮ ದೇವರಾದ ಮಾರುತೇಶ್ವರ, ರೇವಣಸಿದ್ದ, ಮಾಳಿಂಗರಾಯರಲ್ಲಿ ಹರಕೆ ಹೊತ್ತಿದ್ದರು. ಪವಾಡ ಎನ್ನುವಂತೆ ಜಮೀನಿನಲ್ಲಿ ಬಾವಿ ತೋಡಿಸಿದಾಗ ಕೇವಲ 48 ಅಡಿ ಆಳಕ್ಕೆ ನೀರು ಉಕ್ಕಿ ಬಂದು ಅಚ್ಚರಿ ಮೂಡಿಸಿದೆ.

ಸದ್ಯ ಭೀಕರ ಬರಗಾಲದಲ್ಲೂ ಸೂಮಾರು 35 ಅಡಿಯವರೆಗೆ ಬಾವಿಯಲ್ಲಿ ನೀರು ತುಂಬಿದೆ. ಇದನ್ನ ದೇವರ ಪವಾಡ ಎಂದಿರುವ ಬಸಪ್ಪ ಅವರು ಹರಕೆಯಂತೆ ಸಾಮೂಹಿಕ ಮದುವೆ ಮಾಡಿಸಲಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಬಂಗಾರ ಗುಂಡ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *