‘ಮಾನ್ಯ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ’- ಸಿಎಂಗೆ ನೋವಿನ ಪತ್ರ ಬರೆದು ರೈತ ಆತ್ಮಹತ್ಯೆ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ರೈತರ ಸಾವಿಗೆ ಕೊನೆಯೇ ಇಲ್ಲವಂತಾಗಿದ್ದು, ಶುಕ್ರವಾರವೂ ಸಹ ಮಂಡ್ಯ ಮತ್ತು ಬೀದರ್ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಸಾಲಬಾಧೆ ಮತ್ತು ಅನಾರೋಗ್ಯದಿಂದ ತಮ್ಮ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮುನ್ನ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ ಎಂದು ಡೆತ್ ನೋಟ್ ಬರೆದಿದ್ದಾರೆ.

ಡೆತ್‍ನೋಟ್ ನಲ್ಲಿ ನಾನು ಮದುವೆಯಾಗಿ ಸುಮಾರು 15 ವರ್ಷ ಆಗಿದೆ. ರಕ್ಷಿತ್ (13) ಹಾಗೂ ರಾಜೇಶ್ (10) ಎಂಬ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. 3 ಲಕ್ಷ ರೂಪಾಯಿ ಸಾಲವನ್ನು ಮಾಡಿದ್ದು, ಜೊತೆಗೆ 80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ. ಆದರೆ ಇಂದು ಅದು ಕೂಡ ಕೈ ಹಿಡಿಯಲಿಲ್ಲ. ನನಗೆ ಗಂಟಲು ಕ್ಯಾನ್ಸರ್ ಇದ್ದು, ವೈದ್ಯರು ಮೂರು ಲಕ್ಷ ರೂಪಾಯಿ ಹಣ ಬೇಕೆಂದು ಹೇಳಿದ್ದಾರೆ. ನಾಲ್ಕು ವರ್ಷದಿಂದ ಬರಗಾಲ ಬಂದು ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಕುಟುಂಬಕ್ಕೆ ಸಹಾಯಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

ವಿಷಯ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮುಖ್ಯಮಂತ್ರಿ ಕುಮಾರಸ್ವಾಮಿ ಬರುವವರೆಗೂ ಸ್ಥಳದಿಂದ ಮೃತದೇಹವನ್ನು ಎತ್ತುವುದಿಲ್ಲವೆಂದು ಸ್ಥಳದಲ್ಲೇ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಅಲ್ಲದೇ ಸಿಎಂ ಅವರು ಸಂಚರಿಸುವ ಮಾರ್ಗದ ಸಮೀಪವೇ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ತೆರಳಿದ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಮೃತ ರೈತನ ಕುಟುಂಬಕ್ಕೆ ಸಾಂತ್ವಾನ ಹೇಳಿ, ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಅಲ್ಲದೇ ಸರ್ಕಾರದಿಂದ ಬರಬಹುದಾಗಿರುವ ಪರಿಹಾರಗಳನ್ನು ಕೊಡಿಸುವ ಬಗ್ಗೆ ಭರವಸೆ ನೀಡಿದ್ದರಿಂದ ಕುಟುಂಬಸ್ಥರು ರೈತನ ಶವಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಬೀದರ್ ತಾಲೂಕಿನ ಬಸಂತಪುರ ಗ್ರಾಮದ ರೈತ ಶಿವರಾಜ್ (45) ಸಾಲಕ್ಕೆ ಹೆದರಿ, ಯಾರು ಇಲ್ಲದ ವೇಳೆ ತಮ್ಮ ಹೊಲದಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶಿವರಾಜ್ ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ 50 ಸಾವಿರ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ಬೆಳೆ ಇಲ್ಲದೇ, ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=Wz8MLiz9Q70

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *