RCB ಕಪ್‌ ಗೆಲ್ಲುವಂತೆ ಬೆಂಬಲಿಸಿ ಎಂದ ‌ಅಭಿಮಾನಿ – ಲೆಜೆಂಡ್‌ ಮಹಿ ಕೊಟ್ಟ ಉತ್ತರ ಏನು?

Public TV
3 Min Read

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ‌16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2024ರ ಟೂರ್ನಿಯಲ್ಲಿ ಚಾಂಪಿಯನ್ ಟ್ರೋಫಿ ಗೆಲ್ಲುವಂತೆ ಬೆಂಬಲಿಸಿ ಎಂದು ಆರ್‌ಸಿಬಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್‌ ಧೋನಿ (MS Dhoni) ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು (RCB Fan) 17ನೇ ಆವೃತ್ತಿಯಲ್ಲಿ ಆರ್‌ಸಿಬಿ ಕಪ್‌ (RCB Trophy) ಗೆಲ್ಲುವಂತೆ ನೀವು ಬೆಂಬಲಿಸಬೇಕು ಎಂದು ಧೋನಿ ಅವರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಲೆಜೆಂಡ್‌, ಬೆಂಗಳೂರು ನಿಜಕ್ಕೂ ಉತ್ತಮ ತಂಡವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಬಲಿಷ್ಠವಾಗಿವೆ. ಎಲ್ಲ ತಂಡಗಳು ಟ್ರೋಫಿ ಗೆಲ್ಲಲಿ ಎಂದು ನಾನು ಶುಭಕೋರಬಹುದು, ಆದ್ರೆ ನನ್ನ ತಂಡದಿಂದ ಆಚೆ ಬಂದು ಪ್ರತ್ಯೇಕವಾಗಿ ಮತ್ತೊಂದು ತಂಡವನ್ನು ಬೆಂಬಲಿಸೋದಕ್ಕೆ ಆಗಲ್ಲ. ಹಾಗೆ ಮಾಡಿದ್ರೆ ನನ್ನ ತಂಡದ ಅಭಿಮಾನಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಐಪಿಎಲ್ ಟೂರ್ನಿಯ ಕುರಿತು ಮಾತನಾಡುವುದಾದ್ರೆ ಎಲ್ಲಾ 10 ತಂಡಗಳು ಉತ್ತಮ ಆಟಗಾರರನ್ನ ಹೊಂದಿವೆ. ಆರ್‌ಸಿಬಿ ನಿಜಕ್ಕೂ ಉತ್ತಮ ತಂಡ. ಆದ್ರೆ ನಾವು ಮೊದಲು ಕ್ರಿಕೆಟ್‌ನಲ್ಲಿ ಹೇಗೆ ಪ್ಲ್ಯಾನ್‌ ಮಾಡ್ತೀವಿ ಅನ್ನೋದನ್ನ ಅರಿತುಕೊಳ್ಳಬೇಕು. ಟೂರ್ನಿಯಲ್ಲಿ ವೈಯಕ್ತಿಕ ಕಾರಣಗಳು, ಗಾಯದ ಸಮಸ್ಯೆಗಳಿಂದ ಪ್ರಮುಖ ಆಟಗಾರರ ಸೇವೆ ಕಳೆದುಕೊಂಡಾಗ ನಿಜವಾದ ಸಮಸ್ಯೆ ಎದುರಾಗುತ್ತದೆ. ಅಲ್ಲದೇ ಎಲ್ಲ ಯೋಜನೆಗಳು ನಾವು ಹಾಕಿಕೊಂಡಂತೆ ಸಾಗುವುದಿಲ್ಲ ಎಂದು ಮಹಿ ಹೇಳಿದ್ದಾರೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

ಸದ್ಯದ ಪರಿಸ್ಥಿತಿಯಲ್ಲಿ ನನ್ನ ಸ್ವಂತ ತಂಡದಲ್ಲೂ ಕೆಲವು ಸಂಗತಿಗಳ ಕುರಿತು ಚಿಂತಿಸುತ್ತಿದ್ದೇನೆ. ನಾನು ಎಲ್ಲ ತಂಡಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ಅದಕ್ಕಿಂತ ಹೆಚ್ಚಿನದ್ದನ್ನು ಏನು ಮಾಡಲು ಸಾಧ್ಯವಿಲ್ಲ. ಬೇರೆ ತಂಡಗಳಿಗೆ ನೆರವು ನೀಡಲು ಹೋದ್ರೆ, ಸಿಎಸ್‌ಕೆ ಅಭಿಮಾನಿಗಳಿಗೆ ಏನನ್ನಿಸುತ್ತೆ ಅನ್ನೋದನ್ನ ಯೋಚಿಸಿ ಎಂದು ತಿಳಿಸಿದ್ದಾರೆ.

ಹರಾಜಿನಲ್ಲಿ ಸಿಎಸ್‌ಕೆ ಪಾಲಾದ ಆಟಗಾರರು:
2024ರ ಐಪಿಎಲ್ ಟೂರ್ನಿಗಾಗಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ, ರಚಿನ್ ರವೀಂದ್ರ (1.80 ಕೋಟಿ ರೂ.), ಶಾರ್ದೂಲ್‌ ಠಾಕೂರ್ (4 ಕೋಟಿ ರೂ.), ಡೇರಿಲ್‌ ಮಿಚೆಲ್ (14 ಕೋಟಿ ರೂ.), ಸಮೀರ್ ರಿಜ್ವಿ (8.40 ಕೋಟಿ ರೂ.), ಮುಸ್ತಾಫಿಝರ್‌ (2 ಕೋಟಿ ರೂ.), ಅವನೀಶ್ ರಾವ್ ಅರವೆಲ್ಲಿ (20 ಲಕ್ಷ ರೂ.) ಸೇರಿದಂತೆ 6 ಆಟಗಾರರನ್ನು ಖರೀದಿಸಿತು. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್‌ – ಕಿವೀಸ್‌ ಫ್ಲೇವರ್‌ ಆಯ್ತು ಸೂಪರ್‌ ಕಿಂಗ್ಸ್‌!

2023ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್ ಟೈಟಾನ್ಸ್‌ ತಂಡ 20 ಓವರ್‌ಗಳಲ್ಲಿ 214 ರನ್‌ ಬಾರಿಸಿತ್ತು. ಆದ್ರೆ ಮಳೆ ಅಡಿಯುಂಟು ಮಾಡಿದ್ದರಿಂದ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರುಮಾಡಿದ ಸಿಎಸ್‌ಕೆ 5 ವಿಕೆಟ್‌ಗಳ ಗೆಲುವು ಸಾಧಿಸಿ 5ನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಸಿಎಸ್‌ಕೆ 5 ಬಾರಿ ಟ್ರೋಫಿ ಗೆದ್ದ ಸಾಧನೆಗೆ ಪಾತ್ರವಾಗಿವೆ.

Share This Article