ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

Public TV
1 Min Read

ಬೆಂಗಳೂರು: ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ನಿರ್ದೇಶಕ ರಾಕೇಶ್ ಹೊಸಾ ಚಿತ್ರಕ್ಕೆ ತಯಾರಿ ನಡೆಸಿರೋದು ಆ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋ ವಿಚಾರ ಈಗಾಗಲೇ ಜಾಹೀರಾಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಹೆಸರೇ ಹೇಳುವಂತೆ ಮಂಡ್ಯದ ಗಂಡು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಈ ಸಿನಿಮಾದ್ದು. ಈ ಸಿನಿಮಾದಲ್ಲಿ ಯಾರು ಹೀರೋ ಆಗಿ ನಟಿಸುತ್ತಾರೆ ಎಂಬುದನ್ನು ಈ ಕ್ಷಣಕ್ಕೂ ಗೌಪ್ಯವಾಗಿ ಇಡಲಾಗಿದೆ.

ಒಂದು ಮೂಲದ ಪ್ರಕಾರ ಈ ಚಿತ್ರದ ಹೀರೋ ಅಂಬರೀಶ್ ಅವರ ಪರಮಾಪ್ತರಲ್ಲೊಬ್ಬರು ಅನ್ನೋ ಮಾತೂ ಕೇಳಿಬರುತ್ತಿದೆ. ಅವರು ಯಾರೆಂಬ ವಿಚಾರವನ್ನು ರಾಕೇಶ್ ಇಷ್ಟರಲ್ಲೇ ಜಾಹೀರು ಮಾಡಲಿದ್ದಾರಂತೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದ ಆ ಹೀರೋ ಯಾರೆಂಬ ಬಗ್ಗೆ ಈಗಾಗಲೇ ಜನ ಅಂದಾಜು ಊಹಿಸಲು ಶುರು ಮಾಡಿದ್ದಾರೆ. ಆದರೆ ಅವರ್ಯಾರೆಂದು ಕಂಡು ಹಿಡಿಯೋದು ಅಷ್ಟು ಸಲೀಸಿನ ವಿಚಾರವಲ್ಲ. ಯಾಕೆಂದರೆ ಅಂಬಿ ಬಳಗ ತುಂಬಾ ದೊಡ್ಡದು! ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದಲ್ಲಿ ಅಂಬಿ ಬದುಕಿನ ಕಥೆ ಇದೆಯಾ? ಅದು ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾ ಅನ್ನೋದೂ ಕೂಡಾ ಹೀರೋ ಯಾರೆಂಬಷ್ಟೇ ನಿಗೂಢ. ಆದರೆ ಇದು ಮಂಡ್ಯಾ ಸೀಮೆಯ ಹಳ್ಳಿ ವಾತಾವರಣದಲ್ಲಿ ನಡೆಯೋ ಪಕ್ಕಾ ಗ್ರಾಮೀಣ ಸೊಗಡಿನ ಕಥೆ ಹೊಂದಿರೋ ಚಿತ್ರ ಅನ್ನೋದಂತೂ ಸತ್ಯ.

ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯದ ಮೈದಾನದಲ್ಲಿ ಅಂತಿಮ ದರ್ಶನಕ್ಕಿಟ್ಟಿದ್ದ ಜಾಗದಲ್ಲೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಆರಂಭಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಅನ್ನೋ ಮಾತು ಕೇಳಿಬರುತ್ತಿತ್ತು. ಅದು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಡ್ಯದ ಯಾವುದಾದರೂ ಪ್ರಮುಖ ಸ್ಥಳದಲ್ಲಿ ನಡೆಯೋದು ಖಚಿತ. ಅದು ಎಲೆಕ್ಷನ್ ಮುಗಿದ ನಂತರವಾ ಅಥವಾ ಅದಕ್ಕೆ ಮುಂಚೆಯೇ ಶುರುವಾಗುತ್ತದಾ ಅನ್ನುವುದರ ಮಾಹಿತಿಯಷ್ಟೇ ಹೊರಬೀಳಬೇಕು.

Share This Article
Leave a Comment

Leave a Reply

Your email address will not be published. Required fields are marked *