ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

Public TV
2 Min Read

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗಣಪತಿ ಭಟ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಇಂದು ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 7:45ಕ್ಕೆ ಹೃದಯಾಘಾತದಿಂದ ಸಾವನ್ನಪಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ತಮ್ಮದೇ ಶೈಲಿಯ ಮೂಲಕ ರಂಗದಲ್ಲಿ  ಹಾಡಿ ಕಲಾವಿದರನ್ನು ಹುರಿದುಂಬಿಸುತ್ತಿದ್ದ ಪದ್ಯಾಣರನ್ನು ಕಳೆದುಕೊಂಡ ಯಕ್ಷಗಾನ ರಂಗವು ಬಡವಾಗಿದೆ.

ಹಿನ್ನೆಲೆ:
ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಗೋಳ್ತಾಜೆಯಲ್ಲಿ ಜನಿಸಿದ ಗಣಪತಿ ಭಟ್ ಮೂಲತಃ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟಂಬದವರಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಪದ್ಯಾಣ ಮನೆತನದ ಕೊಡುಗೆ ಅಪಾರ. ಈ ಮನೆತನದ ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಗಣಪತಿ ಭಟ್ ಜನಿಸಿದ್ದರು. ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಪಡೆದಿದ್ದರು. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

ಬಾಲ್ಯದಲ್ಲೇ ಯಕ್ಷಗಾನದತ್ತ ಆಸಕ್ತರಾಗಿದ್ದ ಇವರು ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಗುರು ಮಾಂಬಾಡಿ ನಾರಾಯಣ ಭಾಗವತರ ಬಳಿ ಭಾಗವತಿಕೆ ಅಭ್ಯಾಸ ಮಾಡಿದರು. ಬಳಿಕ ಸುಮಾರು 35 ವರ್ಷಕ್ಕೂ ಅಧಿಕ ಕಾಲ ವಿವಿಧ ಯಕ್ಷಗಾನ ಮೇಳಗಳಲ್ಲಿ ವ್ಯವಸಾಯ ಮಾಡಿದರು.

ಪ್ರಶಸ್ತಿ, ಪ್ರಸಂಗಗಳ ಜನಪ್ರಿಯತೆ:
ಸುರತ್ಕಲ್ ಮೇಳದಲ್ಲಿದ್ದಾಗ ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ ಮೊದಲಾದ ಪ್ರಸಂಗಗಳು ಜನಪ್ರಿಯವಾಗಿದ್ದವು. ಮಂಗಳಾದೇವಿ, ಕರ್ನಾಟಕ, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನಗಳು ಇವರಿಗೆ ಬಂದಿವೆ.

 ಕಲಾ ಸೇವೆ:
ಯಕ್ಷರಂಗದ ಭೀಷ್ಮ ಎಂದು ಕರೆಸಿಕೊಂಡಿರುವ ಡಾ| ಶೇಣಿ ಗೋಪಾಲಕೃಷ್ಣ ಭಟ್ಟ, ಯಕ್ಷರಂಗದ ಮತ್ತೊಬ್ಬ ವಿದ್ವಾಂಸ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ಕುಂಬ್ಳೆ ಸುಂದರ ರಾವ್ ಮೊದಲಾದ ಕಲಾವಿದರೊಂದಿಗೆ ಸುರತ್ಕಲ್ ಮೇಳದಲ್ಲಿ ಪದ್ಯಾಣರು ತಮ್ಮ ಇಂಪಾದ ಕಂಠ, ಏರು ಶ್ರುತಿ, ಭಾವನಾತ್ಮಕ ಗಾಯನದಿಂದ ಯಕ್ಷರಂಗಕ್ಕೆ ತಮ್ಮದೇ ಆದ ಶೈಲಿಯ ಕೊಡುಗೆ ನೀಡಿದರು. ನಾಲ್ಕು ದಶಕಗಳಿಂದ ಅವರ ಯಕ್ಷಗಾನ ಕಲಾಯಾನ ಮುಂದುವರಿದಿತ್ತು. ಸರ್ವಜನಮಾನ್ಯರಾದ, ಸಜ್ಜನ ಪದ್ಯಾಣರು ಗಾನಗಂಧರ್ವರೆಂದೇ ಖ್ಯಾತರಾದವರು. ಇಂದು ಇವರ ನಿಧನದಿಂದ ಯಕ್ಷಗಾನದ ಅಮೂಲ್ಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *