ಖ್ಯಾತ ವೈದ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಗುರುರಾಜ್ ಹೆಬ್ಬಾರ್ ನಿಧನ

Public TV
3 Min Read

ಹಾಸನ: ಖ್ಯಾತ ಹಾಗೂ ಅಪರೂಪದ ವೈದ್ಯರು, ಸಮಾಜ ಸೇವಕರೂ ಆಗಿದ್ದ ಹಿರಿಯ ವೈದ್ಯ ಡಾ. ಗುರುರಾಜ ಹೆಬ್ಬಾರ್ (72) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಭಿಮಾನಿ ಬಳಗ ಕಳೆದ ಆ.19 ರಂದು ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಹೆಬ್ಬಾರರು ಎಲ್ಲರನ್ನೂ ಅಗಲಿದ್ದಾರೆ.

ಮೃತರ ನಿಧನಕ್ಕೆ ವೈದ್ಯರ ಸಂಘ ಸೇರಿ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. 1959 ರ ಜ.1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಸೋಮೇಶ್ವರದಲ್ಲಿ ಜನಿಸಿದ ಇವರು, ನಂತರ ಹಾಸನಕ್ಕೆ ಬಂದು ಕಟ್ಟಾಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ್ದರು. ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ, ಆಲೂರು ತಾಲೂಕು ಪಾಳ್ಯದಲ್ಲಿ ಖಾಸಗಿ ಕ್ಲಿನಿಕ್ ತೆರೆದರು. ಬಳಿಕ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸಲ್ಲಿಸಿದ ಶ್ರೀಯುತರು, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಹಾಸನದಲ್ಲಿ ಖಾಸಗಿ ಕ್ಲಿನಿಕ್ ತೆರೆದು, ತರುವಾಯ ಎಂ.ಜಿ.ರಸ್ತೆಯಲ್ಲಿ ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು. ಇದನ್ನೂ ಓದಿ: ಬ್ರಹ್ಮಪುತ್ರ ನದಿ ದಂಡೆ ಬಳಿಯ 330 ಎಕರೆಯಲ್ಲಿರುವ ಅಕ್ರಮ ಮನೆ ತೆರವು!

ಹೆಬ್ಬಾರ್ ಅವರು ಕೇವಲ ವೈದ್ಯರಷ್ಟೇ ಅಲ್ಲ, ಸಮಾಜ ಸೇವಕರಾಗಿ ತಮ್ಮ ತನು, ಮನ, ಧನ ವ್ಯಯಿಸಿದರು. ಬಡವರ ಬಂಧುವಾಗಿ, ಬಡವರಿಗಾಗಿಯೇ ಹಾಸನದಲ್ಲಿ ಮೊದಲಿಗೆ ಸಹಕಾರಿ ತತ್ವದಡಿ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ನಿಂದ ಸಿ.ಟಿ. ಸ್ಕ್ಯಾನಿಂಗ್ ಸೆಂಟರ್ ತೆರೆದರು. ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮಧೇನು ಸಹಕಾರಿ ವಿದ್ಯಾಶ್ರಮ (ವೃದ್ಧಾಶ್ರಮ), ರೈತ ಬಂಧು ಸಹಕಾರಿ ಸಂಸ್ಥೆ, ಪರಿಪೂರ್ಣ ಚಾರಿಟಬಲ್ ಟ್ರಸ್ಟ್‍ನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದರು.

ಅಷ್ಟೇ ಅಲ್ಲದೆ ನಂದಗೋಕುಲ ಶಿಶುಕೇಂದ್ರ, ಗೋ ಸಂರಕ್ಷಣೆ, ಪ್ರಾಣಿಹಿಂಸಾ ನಿವಾರಣಾ ಸಂಘ, ಹಾಸನಾಂಬ ಧರ್ಮಛತ್ರ ಹೀಗೆ ನಾನಾ ಸಂಸ್ಥೆಗಳ ಹುಟ್ಟಿಗೆ ಕಾರಣರಾದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀಯುತರು, ಬಡವರು, ದೀನ ದಲಿತರು, ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡಿದ್ದರು.

ಅಸಹಾಯಕರಿಗೆ ಆರ್ಥಿಕ ನೆರವನ್ನೂ ಒದಗಿಸಿದ್ದರು. ಕೊಡುಗೈ ದಾನಿಯಾಗಿ ಕೈ ನೀಡಿ ನೀಡಿದರೇ ಹೊರತು, ಎಂದಿಗೂ ಯಾರ ಮುಂದೆಯು ಕೈ ಚಾಚಿದವರಲ್ಲ. ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯಾತೀತ ವ್ಯಕ್ತಿತ್ವ ಇವರದಾಗಿತ್ತು. ಅಜಾತ ಶತ್ರು ಎಂದೇ ಖ್ಯಾತನಾಮರಾಗಿದ್ದ ಡಾ.ಗುರುರಾಜ್ ಹೆಬ್ಬಾರರು, ಶಿಸ್ತುಬದ್ಧ ಜೀವನ, ಭ್ರಷ್ಟಾಚಾರದ ಕಡುವೈರಿಯಾಗಿದ್ದರು. ಇಂಥ ಅಪರೂಪದ ವ್ಯಕ್ತಿತ್ವದ ವೈದ್ಯರು ಇನ್ನಿಲ್ಲವಾಗಿರುವುದು ಅಪಾರ ಮಂದಿಗೆ ಅತೀವ ನೋವು ತರಿಸಿದೆ.

ಜಿಲ್ಲೆಯ ಹಿರಿಯ ವೈದ್ಯರು, ಸಮಾಜ ಸೇವಕರಾದ ಡಾ. ಗುರುರಾಜ್ ಹೆಬ್ಬಾರ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ನನ್ನ ಆತ್ಮೀಯ ಒಡನಾಡಿಯೂ ಆಗಿದ್ದ ಹೆಬ್ಬಾರರ ನಿಧನ ನನಗೆ ವೈಯಕ್ತಿಕವಾಗಿ ಅತೀವ ನೋವು ತಂದಿದೆ. ಶ್ರೀಯುತರು ವೈದ್ಯರಾಗಿ ಅಲ್ಲದೆ, ಸಮಾಜ ಸೇವಕರಾಗಿಯೂ ಅಪಾರ ಜನ ಮನ್ನಣೆ ಗಳಿಸಿದ್ದರು ಎಂದು ಸ್ಮರಿಸಿದ್ದಾರೆ. ಡಾ.ಮುನಿವೆಂಕಟೇಗೌಡರು, ಡಾ. ಗುರುರಾಜ್ ಹೆಬ್ಬಾರ್ ಅವರು ನನ್ನ ತವರು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಸಂಜೀವಿನಿ ಆಸ್ಪತ್ರೆ ಸ್ಥಾಪಿಸಿ ಸಾಕಷ್ಟು ಶ್ರಮಿಸಿದ್ದರು. ಅವರ ಸೇವೆ ಸದಾ ಸ್ಮರಣೀಯ ಎಂದು ಗುಣಗಾನ ಮಾಡಿದ್ದಾರೆ.

ಬೇರೆ ಜಿಲ್ಲೆಯಲ್ಲಿ ಹುಟ್ಟಿ ನಮ್ಮೂರಿಗೆ ಬಂದು ಬಡವರಿಗೆ ಶ್ರೀಯುತರು ಸ್ಪಂದಿಸಿದ ರೀತಿಯನ್ನು ಎಂದೂ ಮರೆಯಲಾಗದು. ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ, ಖಾಸಗಿಯಾಗಿಯೂ ಜನಸೇವೆ ಮಾಡಬಹುದು ಎಂಬುದನ್ನು ಹೆಬ್ಬಾರರು ತೋರಿಸಿಕೊಟ್ಟಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡರು ಪ್ರಾರ್ಥಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *