ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಉರಗ ತಜ್ಞರು ಬಂದ್ಮೇಲೆ ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು!

Public TV
2 Min Read

ವಾಷಿಂಗ್ಟನ್: ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಹಾವು ಕಾಣಿಸಿಕೊಂಡರೆ ಹೌಹಾರಿಬಿಡ್ತೀವಿ. ಹಾವನ್ನ ಹಿಡಿದ ನಂತರವೂ ಅದು ಕಾಣಿಸಿಕೊಂಡ ಜಾಗದಲ್ಲಿ ಓಡಾಡಲು ಭಯಪಡೋರೂ ಇದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ್ರೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ? ಇಂತಹದ್ದೇ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಟೆಕ್ಸಾಸ್‍ನ ಜೋನ್ಸ್ ಕೌಂಟಿಯ ಮನೆಯೊಂದರಲ್ಲಿ ಟಾಯ್ಲೆಟ್ ಕಮೋಡ್‍ನಲ್ಲಿ ರ್ಯಾಟಲ್ ಸ್ನೇಕ್ ಜಾತಿಯ ಹಾವೊಂದು ಕಾಣಿಸಿಕೊಂಡಿತ್ತು. ಕೂಡಲೇ ಮನೆಯವರು ಬಿಗ್ ಕಂಟ್ರಿ ಸ್ನೇಕ್ ರಿಮೂವಲ್ ಎಂಬ ಕೀಟ ನಿಯಂತ್ರಕ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ರು. ನಂತರ ಉರಗ ತಜ್ಞರು ಬಂದು ಆ ಹಾವನ್ನು ಹಿಡಿದಿದ್ದೂ ಆಯ್ತು. ಆದ್ರೆ ಆಮೇಲೆ ಗೊತ್ತಿಗಿದ್ದು ಆ ಮನೆಯಲ್ಲಿ ಇನ್ನೂ 23 ಹಾವುಗಳಿದ್ದವು ಅನ್ನೋದು.

ಬಿಗ್ ಕಂಟ್ರಿ ಸ್ನೇಕ್ ರಿಮೂವಲ್ ಸಿಬ್ಬಂದಿ ಈ ಹಾವುಗಳ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಎಲ್ಲವನ್ನೂ ವಿವರಿಸಿದ್ದಾರೆ. ಕಳೆದ ವಾರ ಜೋನ್ಸ್ ಕೌಂಟಿಯ ಕುಟುಂಬವೊಂದರಿಂದ ಕರೆ ಬಂದಿತ್ತು. ಅವರ ಮನೆಯ ಟಾಯ್ಲೆಟ್‍ನಲ್ಲಿ ಹಾವು ಕಾಣಿಸಿಕೊಂಡಿತ್ತು. ಮುರಿದ ಪೈಪಿನೊಳಗಿಂದ ಆ ಹಾವು ಅಲ್ಲಿಗೆ ಬಂದಿತ್ತು. ಬಳಿಕ ಹಾವನ್ನು ಹಿಡಿದು ಪೈಪನ್ನು ಸೀಲ್ ಮಾಡಿದ್ದೇವೆ. ಹಲವಾರು ವರ್ಷಗಳಿಂದೀಚೆಗೆ ಆ ಕುಟುಂಬದವರ ತಮ್ಮ ಮನೆಯ ಸುತ್ತಮುತ್ತ ಹಾವು ನೋಡಿದ್ದು ಇದೇ ಮೊದಲು.

ನಂತರ ನಾವು ಆ ಜಾಗವನ್ನು ಪರಿಶೀಲಿಸಿದೆವು. ಸೆಲ್ಲರ್‍ಗೆ ಹೋದಾಗ ಅಲ್ಲಿ 13 ಹಾವುಗಳಿದ್ದವು. ಅವನ್ನು ಸುರಕ್ಷಿತವಾಗಿ ಹೊರತೆಗೆಯಲಾಯ್ತು. ಮತ್ತೆ ಮುಂದುವರಿದು ಸೂಕ್ಷ್ಮವಾಗಿ ಪರಿಶೀಲಿಸದಾಗ ಮನೆಯ ಕೆಳಗೆ 5 ಪುಟ್ಟ ಮರಿಗಳು ಸೇರಿದಂತೆ 10 ಹಾವುಗಳನ್ನು ಹಿಡಿದೆವು. ಅಲ್ಲಿಗೆ ನಾವು ಟಾಯ್ಲೆಟ್‍ನಲ್ಲಿ ಕಾಣಿಸಿಕೊಂಡ ಹಾವು ಸೇರಿದಂತೆ ಒಟ್ಟು 24 ಹಾವುಗಳನ್ನ ಹಿಡಿದಿದ್ದೆವು. ಕುಟುಂಬದವರಿಗೆ ಈ ಬಗ್ಗೆ ಆಲೋಚನೆಯೇ ಇರಲಿಲ್ಲ.

ಇದು ಹೇಗೆ ಸಾಧ್ಯ ಅಂದ್ರೆ ತುಂಬಾ ಸಿಂಪಲ್- ರ್ಯಾಟಲ್ ಸ್ನೇಕ್ ಜಾತಿಯ ಹಾವುಗಳು ರಹಸ್ಯ ಸ್ಥಳಗಳಲ್ಲಿರುತ್ತವೆ. ವಾತಾವರಣಕ್ಕೆ ತಕ್ಕಂತೆ ದೇಹದ ಬಣ್ಣವನ್ನು ಒಗಿಸ್ಸಿಕೊಂಡು ಬದುಕುತ್ತವೆ. ನೀವು ನೋಡಲಿಲ್ಲ ಎಂದ ಮಾತ್ರಕ್ಕೆ ಅವು ಅಲ್ಲಿಲ್ಲ ಅಂತ ಅರ್ಥವಲ್ಲ ಅಂತ ಪೋಸ್ಟ್ ಹಾಕಿದ್ದಾರೆ.

ಇದನ್ನು ಊಹಿಸಿಕೊಂಡ್ರೇನೇ ಮೈ ಮೇಲೆ ಹಾವು ಹರಿದಾಡಿದಂತಾಗುತ್ತೆ. ಇನ್ನು ಆ ಮನೆಯವರಿಗೆ ಹೇಗಾಗಿರಬೇಡ!

Share This Article
Leave a Comment

Leave a Reply

Your email address will not be published. Required fields are marked *