ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಶಿಕ್ಷೆ ನೀಡಿದ್ದಾರೆ: ಎಚ್‍ಡಿಡಿ

Public TV
1 Min Read

ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲೇ ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಜನರೂ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದನ್ನು ನೋಡಿದ್ದೇನೆ. ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿಕೊಂಡು ಬಂದೆ. ನಾನು ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಒಳ್ಳೆಯ ಹೆಸರು ಪಡೆಯುತ್ತಿದ್ದಾನೆ. ನಿಖಿಲ್ ರಾಜಕೀಯಕ್ಕೆ ಬರುವುದು ಸಹ ಕನಸು ಮನಸಲ್ಲೂ ಗೊತ್ತಿರಲಿಲ್ಲ ಎಂದು ಹೇಳಿ ದೇವೇಗೌಡರು ಭಾವುಕರಾದರು.

ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೆ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಮತ್ತೊಮ್ಮೆ ಬಿಜೆಪಿ ಪಕ್ಷ ತಲೆ ಎತ್ತಬಾರದು. ನಾನು ಸತ್ತರೂ ಸಹ ಪಕ್ಷ ಉಳಿಸುತ್ತೇನೆ. ನನ್ನ ಕಾಲ ಮುಗಿಯುತ್ತಾ ಬಂದಿದೆ. ಕೊನೆ ಉಸಿರಿರುವ ವರೆಗೆ ಪಕ್ಷದ ಏಳಿಗೆಗಾಗಿ ದುಡಿಯುತ್ತೇನೆ. ಇನ್ನು ಮುಂದೆ ಮುಂದಿನ ಪೀಳಿಗೆಯ ಜವಾಬ್ದಾರಿ ಎಂದು ದೇವೇಗೌಡ ಅವರು ಕಾರ್ಯಕರ್ತರ ಸಭೆಯಲ್ಲಿ ಭಾವುಕರಾದರು.

Share This Article
Leave a Comment

Leave a Reply

Your email address will not be published. Required fields are marked *