ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

Public TV
2 Min Read

ನವದೆಹಲಿ: ಹುತಾತ್ಮರಾಗಿರುವ ಅಗ್ನಿವೀರ್‌ ಅಜಯ್‌ ಕುಮಾರ್‌ (Agniveer Ajay Kumar) ಅವರ ಕುಟುಂಬಕ್ಕೆ ಈಗಾಗಲೇ 98.39 ಲಕ್ಷ ರೂ. ನೀಡಲಾಗಿದೆ ಎಂದು ಎಡಿಜಿಪಿ – ಇಂಡಿಯನ್‌ ಆರ್ಮಿ (ADGP Indian Army) ಸ್ಪಷ್ಟನೆ ನೀಡಿದೆ.

ಹುತಾತ್ಮ ಅಗ್ನಿವೀರ್ ಕುಟುಂಬಕ್ಕೆ ನೀಡಿದ ಹಣಕಾಸಿನ ನೆರವಿನ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳಿದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಸಂಸತ್ತಿನಲ್ಲಿ ಕ್ಷಮೆ ಕೇಳಬೇಕು ಎಂದು ರಾಹುಲ್‌ ಗಾಂಧಿ (Rahul Gandhi) ಆಗ್ರಹಿಸಿದ ಬೆನ್ನಲ್ಲೇ ಎಡಿಜಿಪಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಸ್ಪಷ್ಟನೆ ನೀಡಿದೆ.

ಪೋಸ್ಟ್‌ನಲ್ಲಿ ಏನಿದೆ?
ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬಕ್ಕೆ ಪರಿಹಾರವನ್ನು ಪಾವತಿಸಿಲ್ಲ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಗ್ನಿವೀರ್ ಅಜಯ್ ಕುಮಾರ್ ಅವರ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆಯು ವಂದನೆ ಸಲ್ಲಿಸುತ್ತದೆ. ಸಕಲ ಸೇನಾ ಗೌರವಗಳೊಂದಿಗೆ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಾಕಿಯಿರುವ ಒಟ್ಟು ಮೊತ್ತದಲ್ಲಿ ಅಗ್ನಿವೀರ್ ಅಜಯ್ ಕುಟುಂಬಕ್ಕೆ ಈಗಾಗಲೇ 98.39 ಲಕ್ಷ ರೂ. ಪಾವತಿ ಮಾಡಲಾಗಿದೆ. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಬೆಂಗ್ಳೂರಿಗೆ ವರ್ಗಾವಣೆ?- CISF ಹೇಳಿದ್ದೇನು?

ಅಗ್ನಿವೀರ್ ಸ್ಕೀಮ್‌ನ ನಿಬಂಧನೆಗಳ ಪ್ರಕಾರ ಅನ್ವಯವಾಗುವಂತೆ ಅಂದಾಜು 67 ಲಕ್ಷ ಮೊತ್ತದ ಎಕ್ಸ್ – ಗ್ರೇಷಿಯಾ ಮತ್ತು ಇತರ ಪ್ರಯೋಜನಗಳನ್ನು ಪೊಲೀಸ್ ಪರಿಶೀಲನೆಯ ನಂತರ ಅಂದಾಜು ಒಟ್ಟು ಮೊತ್ತ 1.65 ಕೋಟಿ ರೂ. ನೀಡಲಾಗುತ್ತದೆ ಎಂದು ತಿಳಿಸಿದೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯ ವೇಳೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಅಗ್ನಿವೀರರು ಯೂಸ್‌ ಅಂಡ್‌ ಥ್ರೋ ಕಾರ್ಮಿಕರಿದ್ದಂತೆ. ಸೇನಾಪಡೆಯಲ್ಲಿ ಒಬ್ಬ ಜವಾನನಿಗೆ ಪಿಂಚಣಿ ಸಿಗುತ್ತದೆ. ಇನ್ನೊಬ್ಬ ಜವಾನನಿಗೆ ಸಿಗುವುದಿಲ್ಲ. ನೀವು ಸೈನಿಕರನ್ನು ವಿಭಜನೆ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದರು.

 

Share This Article