ಒಂದೇ ಕುಟುಂಬದ ಐವರ ಮೃತದೇಹ ಮನೆಯೊಳಗೆ ಪತ್ತೆ

Public TV
2 Min Read

– ಇಬ್ಬರು ಮಕ್ಕಳು, ಮಹಿಳೆಯರಿಬ್ಬರು ಸಾವು
– ಗ್ಯಾಸ್ ಕಟ್ಟರ್‌ನಿಂದ ಕಬ್ಬಿಣದ ಗೇಟ್ ಮುರಿದು ಮನೆಗೆ ಪೊಲೀಸ್ ಎಂಟ್ರಿ

ಲಕ್ನೋ: ಒಂದೇ ಕುಟುಂಬದ ಐವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ಮನೆಯಲ್ಲಿಯೇ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಶೃಂಗಾರ್ ನಗರ ಕಾಲೋನಿಯಲ್ಲಿ ನಡೆದಿದ್ದು, ತಮ್ಮ ನಿವಾಸದಲ್ಲಿ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ನಿವೃತ್ತ ಆರೋಗ್ಯ ಕಾರ್ಯಕರ್ತ ರಾಜೇಶ್ವರ್ ಪ್ರಸಾದ್ ಪಚೌರಿ (80), ಅವರ ಸೊಸೆ ದಿವ್ಯಾ (33), ಅವರ ಇಬ್ಬರು ಮಕ್ಕಳಾದ ಲಾಲೂ (1), ಆರುಶ್ (10) ಮತ್ತು ದಿವ್ಯಾ ಸಹೋದರಿ ಬುಲ್‍ಬುಲ್ (25) ಎಂದು ತಿಳಿದುಬಂದಿದೆ.

ಬೆಳಗ್ಗೆ ಹಾಲಿನವನು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಾಲಿನವರು ಅನೇಕ ಬಾರಿ ಬಾಗಿಲು ಬಡಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಕೊನೆಗೆ ಅನುಮಾನಗೊಂಡು ಕಿಟಕಿಯಿಂದ ಮನೆಯೊಳಗೆ ನೋಡಿದಾಗ ಮೃತದೇಹ ಬಿದ್ದಿರುವುದನ್ನು ನೋಡಿ ಭಯಗೊಂಡಿದ್ದಾನೆ. ತಕ್ಷಣ ಆತ ನೆರೆಹೊರೆಯವರಿಗೆ ಮಾಹಿತಿ ತಿಳಿಸಿದ್ದಾನೆ. ಆಗ ನೆರೆಹೊರೆಯ ವಕೀಲ ಅಲೋಕ್ ತಿವಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅವರ ಮನೆಗೆ ಕಬ್ಬಿಣದ ಗೇಟ್ ಹಾಕಿಸಲಾಗಿತ್ತು. ಹೀಗಾಗಿ ಪೊಲೀಸರು ಗ್ಯಾಸ್ ಕಟ್ಟರ್ ಬಳಸಿ ಕಬ್ಬಿಣದ ಗೇಟ್ ಮುರಿದು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಟಾಯ್ಲೆಟ್ ಕ್ಲೀನರ್‌ನ ಖಾಲಿ ಬಾಟೆಲ್, ಮಾತ್ರೆಗಳು ಮತ್ತು ಬ್ಲೇಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಶಾನ್ವ ದಳ ಮತ್ತು ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಸಾಕ್ಷ್ಯಗಳು ಮತ್ತು ಫಿಂಗರ್‌ಪ್ರಿಂಟ್ಸ್ ಸಂಗ್ರಹಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಐವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿವೆ. ಮನೆಯ ವಿವಿಧ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಅವರ ಬಾಯಿಂದ ನೊರೆ ಬರುತ್ತಿರುವುದು ಕಂಡುಬಂದಿದೆ. ಕೆಲವರ ಬಾಯಿಯಲ್ಲಿ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.

ರಾಜೇಶ್ವರ್ ಮೃತದೇಹ ಡ್ರಾಯಿಂಗ್ ರೂಮಿನಲ್ಲಿ ಪತ್ತೆಯಾಗಿದ್ದು, ಅವರ ಸೊಸೆಯ ಮೃತದೇಹ ಮನೆಯ ಪ್ರವೇಶದ್ವಾರದ ಬಳಿಯಿರುವ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಇನ್ನೂ ಇಬ್ಬರು ಮಕ್ಕಳ ಮೃತದೇಹ ಬೆಡ್ ರೂಮಿನಲ್ಲಿ ಪತ್ತೆಯಾಗಿದ್ದು, ಮನೆಯ ಮೊದಲ ಮಹಡಿಯಲ್ಲಿ ಬುಲ್‍ಬುಲ್ ಶವ ಪತ್ತೆಯಾಗಿದೆ.

ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ ಇವರ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *