ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

Public TV
2 Min Read

ಕೋಲಾರ: ಊರಿನ ಜಾತ್ರೆಯಲ್ಲಿ ವೇಳೆ ಉತ್ಸವ ಮೂರ್ತಿ ಹೊತ್ತು ತರುತ್ತಿದ್ದಾಗ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಉಳ್ಳೇರಹಳ್ಳಿ ಗ್ರಾಮದ ದಲಿತ (Dalit Community) ಬಾಲಕ (Boy) ಮುಟ್ಟಿದ. ಈ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಸೇರಿ ಬಾಲಕನ ಪೋಷಕರನ್ನು ಕರೆಸಿ ನ್ಯಾಯ ಪಂಚಾಯಿತಿ ಮಾಡಿ ಆ ಕುಟುಂಬಕ್ಕೆ 60 ಸಾವಿರ ರೂ. ದಂಡ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

ಕಳೆದ ಸೆ.7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವಿಯ ಉತ್ಸವ ಆಯೋಜನೆ ಮಾಡಲಾಗಿತ್ತು. ಉತ್ಸವ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್ ಎಂಬಾತ ಮುಟ್ಟಿದ ಅನ್ನೋ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಸೇರಿ ಚೇತನ್ ತಂದೆ ರಮೇಶ್ ಹಾಗೂ ತಾಯಿ ಶೋಭಾರನ್ನು ಕರೆಸಿ ನ್ಯಾಯ ಪಂಚಾಯಿತಿ ಮಾಡಿ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿದ್ದು ಒಂದು ವೇಳೆ ದಂಡ ಕಟ್ಟದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದ್ದರು ಎಂದು ತಿಳಿದು ಬಂದಿತ್ತು. ಘಟನೆ ನಡೆದು ಕೆಲ ದಿನಗಳ ನಂತರ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ಕೊಟ್ಟ ಕೆಲವು ದಲಿತ ಸಂಘಟನೆ ಮುಖಂಡರು, ಗ್ರಾಮದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಂಡ ಈ ರೀತಿ ಅಸ್ಪೃಶ್ಯತೆ ಖಂಡಿಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಸೆಪ್ಟಂಬರ್ 20 ರಂದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

ಪ್ರಕರಣ ದಾಖಲಾಗುತ್ತಿದ್ದಂತೆ ಗ್ರಾಮದಲ್ಲಿ ಪಂಚಾಯಿತಿ ಮಾಡಿ ದಲಿತ ಕುಟುಂಬಕ್ಕೆ ದಂಡ ವಿಧಿಸಿ, ಬಹಿಷ್ಕಾರ ಹಾಕುವ ಬೆದರಿಕೆ ಹಾಗಿದ್ದ ಒಟ್ಟು ಎಂಟು ಜನರನ್ನು ಸದ್ಯ ಮಾಸ್ತಿ ಪೊಲೀಸರು ಬಂಧಿಸಿದ್ದಾರೆ. ಇದಾದ ನಂತರ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಎಸ್‍ಪಿ ಡಿ.ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ – ಕುಟುಂಬದ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

ದೌರ್ಜನ್ಯಕ್ಕೊಳಗಾದ ಕುಟುಂಬದವರನ್ನು ಗ್ರಾಮದ ಭೂತಮ್ಮ ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ದೇವಾಲಯದ ಒಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಆ ಕುಟುಂಬಕ್ಕೆ ಸಾಂತ್ವನ ಹೇಳಿ ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸವಿದ್ದ ಮಹಿಳೆಗೆ ನಿವೇಶ ಹಾಗೂ ಜೀವನೋಪಾಯಕ್ಕೆ ಒಂದು ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಕುಟುಂಬಕ್ಕೆ ದಿನಸಿ ಕಿಟ್ ಹಾಗೂ ಆರ್ಥಿಕ ನೆರವು ನೀಡಿದ್ರು. ಅಲ್ಲದೆ ಗ್ರಾಮಕ್ಕೆ ಕೋಲಾರ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಹಾಗೂ ಸಮಾಜಕಲ್ಯಾಣಾಧಿಕಾರಿ ಚೆನ್ನಬಸಪ್ಪ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *