ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್‌ ಸಂಸತ್ತಿಗೆ ಸರ್ಕಾರ ಉತ್ತರ

Public TV
2 Min Read

ಪೋರ್ಟ್ ಲೂಯಿಸ್: ಅದಾನಿ ಸಮೂಹದ (Adani Group) ಕಂಪನಿಗಳ ಬಗ್ಗೆ ಹಿಂಡೆನ್‌ಬರ್ಗ್‌ (Hindenburg) ಮಾಡಿರುವ ಸಂಶೋಧನಾ ವರದಿ ಸುಳ್ಳು ಮತ್ತು ಆಧಾರ ರಹಿತ ಎಂದು ಮಾರಿಷಸ್ (Mauritius) ಸರ್ಕಾರ ಅಲ್ಲಿನ ಸಂಸತ್ತಿಗೆ ಉತ್ತರ ನೀಡಿದೆ.

ಲಿಖಿತ ಉತ್ತರ ನೀಡಿದ ಹಣಕಾಸು ಸೇವೆಗಳ ಸಚಿವ ಮಹೇನ್ ಕುಮಾರ್ ಸೀರುತ್ತುನ್, ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿವೆ ಎಂಬ ಆರೋಪಗಳು ಸುಳ್ಳು ಮತ್ತು ನಿರಾಧಾರ ಎಂದು ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ಕಾನೂನಿನ ಪ್ರಕಾರ ಮಾರಿಷಸ್‌ನಲ್ಲಿ ಶೆಲ್ ಕಂಪನಿಗಳಿಗೆ ಅವಕಾಶವಿಲ್ಲ. ಅದಾನಿ ಕಂಪನಿ ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

ಹಣಕಾಸು ಸೇವಾ ಆಯೋಗದಿಂದ ಪರವಾನಗಿ ಪಡೆದ ಎಲ್ಲಾ ಜಾಗತಿಕ ವ್ಯಾಪಾರ ಕಂಪನಿಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಆಯೋಗವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

ಹಿಂಡೆನ್‌ಬರ್ಗ್‌ ಆರೋಪ ಸುಳ್ಳು ಮತ್ತು ಆಧಾರ ರಹಿತ ಎಂದು ಹೇಗೆ ತೀರ್ಮಾನಕ್ಕೆ ಬರಲಾಯಿತು ಎಂದು ಕೇಳಿದ ಪ್ರಶ್ನೆಗೆ, ಮಾರಿಷಸ್‌ನಲ್ಲಿ ಕಂಪನಿ ಪರವಾನಗಿ ಪಡೆಯಬೇಕಾದರೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಆ ಕಂಪನಿಗಳು ಷರತ್ತುಗಳಿಗೆ ಬದ್ಧವಾಗಿರಬೇಕು ಮತ್ತು ಆಯೋಗವೂ ಕಂಪನಿಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಈ ಷರತ್ತುಗಳನ್ನು ಒಪ್ಪಿದ ಕಂಪನಿಗಳನ್ನು ಶೆಲ್‌ ಕಂಪನಿಗಳು ಎಂದು ಹೇಳುವುದು ಆಧಾರ ರಹಿತ ಎಂದು ಅವರು ತಿಳಿಸಿದರು.

 

ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿತ್ತು.

ಅದಾನಿ ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿನ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ನೇಮಕ ಮಾಡಿದ ಸಮಿತಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

 

ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ಒ.ಪಿ. ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡ ಸಮಿತಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ ಮಾರ್ಚ್‌ನಲ್ಲಿ ನೇಮಿಸಿತ್ತು. ಸಮಿತಿ ವರದಿಯನ್ನು ಸಲ್ಲಿಸಿದ್ದು ಮೇ 12 ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.

Share This Article