ಬದುಕಿದ್ದವರನ್ನು ಕೊಲೆ ಮಾಡಲಾಗಿದೆ ಎಂದು ಕೇಂದ್ರಕ್ಕೆ ಸುಳ್ಳು ವರದಿ ಕೊಟ್ಟ ಶೋಭಾ!

Public TV
2 Min Read

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರು ಸಿದ್ಧರಾಮಯ್ಯ ಸರಕಾರದ ವಿರುದ್ಧ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿರುವ ಪತ್ರವೊಂದು ಸೋರಿಕೆಯಾಗಿದೆ. ಈ ಪತ್ರದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದುಗಳ ಹತ್ಯೆಯಾಗಿದೆ ಎಂದು ಕರಂದ್ಲಾಜೆ ಆರೋಪಿಸಿ ಕೇಂದ್ರಕ್ಕೆ ಕೊಲೆಗೀಡಾದವರ ಪಟ್ಟಿ ಕಳುಹಿಸಿದ್ದಾರೆ. ಈ ಪಟ್ಟಿಯನ್ನು ಪರೀಕ್ಷಿಸಿದಾಗ ಇನ್ನೂ ಜೀವಂತವಿರುವವರೂ ಆ ಪಟ್ಟಿಯಲ್ಲಿ ಇದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ನೀಡಿದ ವ್ಯಕ್ತಿಗಳು ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

ಅಶೋಕ್ ಪೂಜಾರಿ, ಮೂಡಬಿದಿರೆ:
2015ರ ಸೆಪ್ಟೆಂಬರ್ 20 ರಂದು ಮುಸುಕುಧಾರಿಗಳಿಂದ ಅಶೋಕ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಅವರಿಗೆ ಗಂಭೀರ ಗಾಯಗಳಾಗಿತ್ತು. ಆದರೆ ಹತ್ಯೆ ನಡೆದಿಲ್ಲ. ನಾನು ಸತ್ತಿಲ್ಲ, ಜೀವಂತ ಇದ್ದೇನೆ ಎಂದು ಮಾಧ್ಯಮಗಳಿಗೆ ಅಶೋಕ್ ಪೂಜಾರಿ ಹೇಳಿದ್ದಾರೆ.

ಕಾರ್ತಿಕ್ ರಾಜ್, ಕೊಣಾಜೆ:
ಮಂಗಳೂರು ಸಮೀಪದ ಕೊಣಾಜೆಯಲ್ಲಿ 2016ರ ಅಕ್ಟೋಬರ್ 23 ರಂದು ಕಾರ್ತಿಕ್ ರಾಜ್ ಹತ್ಯೆ ನಡೆದಿತ್ತು. ತಂಗಿಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಮೂಲಕ ಸಹೋದರಿಯಿಂದಲೇ ಹತ್ಯೆ ನಡೆದಿತ್ತು ಎನ್ನುವ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿತ್ತು.

ವಾಮನ ಪೂಜಾರಿ, ಮೂಡಬಿದಿರೆ:
ಸೆಪ್ಟೆಂಬರ್ 20 ರಂದು ಮಗಳ ಮನೆಯ ಶೆಡ್ಡಿನಲ್ಲಿ ವಾಮನ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಕೊಲೆ ಮಾಡಲಾಗಿದೆ ಎಂದು ಶೋಭಾ ಸುಳ್ಳು ಮಾಹಿತಿ ನೀಡಿದ್ದಾರೆ. ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದ ವಾಮನ ಪೂಜಾರಿ ಅವರಿಗೆ ವಿದೇಶದಿಂದ ಕರೆ ಬಂದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದರು.

ರಾಜು, ಮಡಿಕೇರಿ:
2005ರ ನವೆಂಬರ್ 10ರಂದು ಟಿಪ್ಪು ಜಯಂತಿ ದಿನ ನಡೆದ ಘರ್ಷಣೆಯಲ್ಲಿ ರಾಜು ಮಡಿಕೇರಿ ಮೃತಪಟ್ಟಿದ್ದರು. ಮಡಿಕೇರಿಯ ಆಸ್ಪತ್ರೆ ಛಾವಣಿಯಿಂದ ಕಾಲು ಜಾರಿ ಬಿದ್ದು ರಾಜು ಮೃತಪಟ್ಟಿದ್ದಾರೆ ಎಂದು ಡಿಸಿ ವರದಿಯಲ್ಲಿ ಉಲ್ಲೇಖವಾಗಿತ್ತು.

ಡಿ.ಕೆ.ಕುಟ್ಟಪ್ಪ, ಮಡಿಕೇರಿ:
2015ರ ನವೆಂಬರ್ 11ರಂದು ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಮೃತಪಟ್ಟಿದ್ದರು. ಚಾರ್ಜ್ ಶೀಟ್ ನಲ್ಲಿ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದಾಗ ಕುಟ್ಟಪ್ಪ ಕಾಲು ಜಾರಿ ಸಿಮೆಂಟ್ ಚರಂಡಿ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಉಲ್ಲೇಖಿಸಿದ್ದರು.

ವೆಂಕಟೇಶ್, ಶಿವಮೊಗ್ಗ:
2015ರ ಫೆಬ್ರವರಿ 19ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೆಂಕಟೇಶ್ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು.

ರಮೇಶ್ ಬಂಡಿ, ಬಳ್ಳಾರಿ:
ಜೂನ್ 6, 2017ರಂದು ಬಿಜೆಪಿ ಕಾರ್ಯಕರ್ತ ರಮೇಶ್ ಬಂಡಿ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿದ್ದರು. ಪೊಲೀಸ್ ತನಿಖೆಯ ವೇಳೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ರಮೇಶ್ ಬಂಡಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

 

Share This Article
Leave a Comment

Leave a Reply

Your email address will not be published. Required fields are marked *