ಬಿಡದಿಯ ನಿತ್ಯಾನಂದನ ಸ್ವರೂಪ ಎಂದು ಜನರನ್ನು ವಂಚಿಸುತ್ತಿದ್ದ ಸತ್ಯಾನಂದನಿಗೆ ಗೂಸಾ

Public TV
3 Min Read

ಕಾರವಾರ: ಬಿಡದಿ ನಿತ್ಯಾನಂದನ ಲುಕ್, ಆತನಂತೆಯೇ ಮಾತುಗಾರಿಕೆ, ಹಾವಭಾವ. ನಾನೊಬ್ಬ ನಿತ್ಯಾನಂದನ ಸ್ವರೂಪ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದುಕೊಂಡೇ ಮುಗ್ಧ ಜನರಿಗೆ ಮೋಸ ಮಾಡುತಿದ್ದ ಸತ್ಯಾನಂದ ಸ್ವಾಮಿಯ ಅಸಲಿ ಮುಖವನ್ನು ಮಂಗಳೂರಿನ ಭಜರಂಗದಳದ ಕಾರ್ಯಕರ್ತರು ಹೊರಗೆಳೆದಿದ್ದಾರೆ.

ಬಿಡದಿ ನಿತ್ಯಾನಂದನ ರಾಸಲೀಲೆ ಯಾರು ತಾನೇ ಕೇಳದೇ ಇರಲು ಸಾಧ್ಯ? ಇದೀಗ ನಿತ್ಯಾನಂದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡರೆ, ಆತನ ಸ್ವರೂಪ ತಾನು ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಚವೆಯ ಬೋರಳ್ಳಿಯಲ್ಲಿ ಸತ್ಯಾನಂದ ಉದ್ಭವವಾಗಿ ಬಿಟ್ಟಿದ್ದಾನೆ. ಈತ ತಾನು ಧರಿಸುವ ಕಾವಿಯಿಂದ ಹಿಡಿದು ಹಾವಾಭಾವದಲ್ಲೂ ನಿತ್ಯಾನಂದನ ಅನುಕರಣೆ ಮಾಡುತ್ತಾನೆ. ಅಷ್ಟೇ ಅಲ್ಲ, ಈತನಿಗೆ ಮಹಿಳೆಯರು ಎಂದರೆ ಅತೀವ ಪ್ರೀತಿ. ಹೀಗಾಗಿ ನಿತ್ಯಾನಂದನ ಪ್ರಭಾವದಲ್ಲಿ ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿ ಜೈಲಿನ ಕಂಬಿ ಎಣಿಸಿ ಬೇಲ್ ಮೂಲಕ ಹೊರಬಂದಿದ್ದಾನೆ.

ಇಷ್ಟಾದರೂ ತನ್ನ ಚಾಳಿ ಮುಂದುವರಿಸಿರುವ ಈತ ಸತ್ಯಾನಂದ ಪರಮಶಿವ ಎಂಬ ಫೇಸ್‌ಬುಕ್ ಅಕೌಂಟ್ ಮಾಡಿಕೊಂಡು ಪ್ರತಿ ದಿನ ಧಾರ್ಮಿಕ ವಿಚಾರವಾಗಿ ದಿನಗಟ್ಟಲೆ ಪ್ರವಚನ ನೀಡುತಿದ್ದ. ಇಷ್ಟು ಸಾಲದು ಎನ್ನುವಂತೆ ಭಾರತ ಮಾತೆ ನನ್ನ ಹೆಂಡತಿ, ಇಲ್ಲಿರುವ ಜನರು ನನ್ನ ಮಕ್ಕಳು ಎಂದು ಕೆಟ್ಟದಾಗಿ ಹೇಳುವುದರ ಜೊತೆಗೆ ಹಿಂದೂ ದೇವರು, ಧರ್ಮ ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದ. ತಾನೇ ದೇವರೆಂದು ಹೇಳುವ ಮೂಲಕ ಈತ ನಿತ್ಯಾನಂದನಿಗೆ ಕಮ್ಮಿ ಇಲ್ಲ ಎನ್ನುವಂತೆ ನಡೆದುಕೊಳ್ಳುತಿದ್ದ.

ಈತ ಫೇಸ್‌ಬುಕ್ ಮೂಲಕ ಮುಗ್ಧ ಮಹಿಳೆಯರನ್ನು ತನ್ನ ನಯವಾದ ಮಾತಿನಿಂದ ಆಕರ್ಷಿಸಿ ಹಣ ಪೀಕುವುದಲ್ಲದೇ, ದೇವಿ ದರ್ಶನ ಮಾಡಿಸುತ್ತೇನೆ, ನನ್ನ ಆಶ್ರಮಕ್ಕೆ ಬನ್ನಿ ಎಂದು ಕರೆಸಿಕೊಳ್ಳುತ್ತಿದ್ದ. ಹೀಗೆ ಮಂಗಳೂರಿನ ಮಹಿಳೆಗೆ ಕರೆಸಿ, ದೇವರನ್ನು ತೋರಿಸಲು ಹೋಗಿದ್ದವ ಇದೀಗ ಭಜರಂಗದಳ ಕಾರ್ಯಕರ್ತರಿಂದ ಗೂಸಾ ತಿಂದು ಕ್ಷಮಾಪಣೆ ಕೇಳಿ ಕಾವಿ ಕಳಚಿದ್ದಾನೆ.

ಈ ಕಳ್ಳ ಸ್ವಾಮೀಜಿಯ ನಿಜವಾದ ಹೆಸರು ಶೇಖರ್ ಸಣ್ತಮ್ಮ ಪಟಗಾರ್. ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿ ಆಟೋ ಚಲಾಯಿಸಿಕೊಂಡಿದ್ದ. ಕಳೆದೆರಡು ವರ್ಷಗಳಿಂದ ಅದೇನಾಯ್ತೋ ಏನೋ ತನ್ನ ಮೈ ಮೇಲೆ ದೇವಿ ಬರುತ್ತಾಳೆ. ನಾನು ನಿತ್ಯಾನಂದನ ಸ್ವರೂಪಿ ಎಂದು ಕಾವಿ, ರುದ್ರಾಕ್ಷಿ ತೊಟ್ಟು ಸ್ವಯಂ ಘೋಷಿಸಿತ ಸ್ವಾಮೀಜಿ ಆಗಿದ್ದಾನೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ – ಇದು ಹೇಡಿಗಳ ಲಕ್ಷಣ ಎಂದ ಈಶ್ವರಪ್ಪ

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅದರಲ್ಲಿ ವೀಡಿಯೋ ಹರಿಬಿಟ್ಟು ಜನರನ್ನು ಮರುಳು ಮಾಡುತ್ತಿದ್ದ ಈತನಿಗೆ 2,000ಕ್ಕೂ ಹೆಚ್ಚು ಜನ ಫಾಲೋವರ್‌ಗಳು ಇದ್ದಾರೆ. ಈತ ತನ್ನ ಮನೆಯನ್ನೇ ಆಶ್ರಮ ಮಾಡಿಕೊಂಡು ಅಲ್ಲಿಗೆ ತನ್ನ ಅನುಯಾಯಿಗಳನ್ನು ಕರೆಸಿಕೊಂಡು ಜ್ಯೋತಿಷ್ಯ, ವಾಸ್ತು, ಧರ್ಮ ಬೋಧನೆ ಎಂದು ಪುಂಗಿ ಬಿಟ್ಟು ಹಣ ಪೀಕುತ್ತಿದ್ದ. ಎಲ್ಲಿ ಈತನಿಗೆ ಮಹಿಳೆಯರ ಚಪಲ ಹೆಚ್ಚಾಯಿತೋ ಆಗ ಈತನ ಅಸಲಿ ಮುಖ ಆತನ ಅನುಯಾಯಿಗಳಿಗೆ ನಿಧಾನವಾಗಿ ತಿಳಿಯಲು ಪ್ರಾರಂಭವಾಯಿತು.

ಇತ್ತೀಚೆಗೆ ಗ್ರಾಮ ಪಂಚಾಯಿತಿಯವರು ಈತನ ಬಳಿ ಬರುವ ಜನರಿಗೆ ಮೋಸದ ವಿಷಯ ತಿಳಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಆತನಿಗೆ ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಇವೆಲ್ಲವನ್ನು ಬಿಡುವಂತೆ ಹೇಳಿದ್ದರು. ಆದರೆ ಇದ್ಯಾವುದಕ್ಕೂ ಕಿವಿಗೊಡದ ಈತ ತನ್ನ ವಂಚನೆ ಕೆಲಸವನ್ನು ಮುಂದುವರಿಸಿದ್ದ. ಈ ವಿಷಯ ತಿಳಿದು ಒಂದು ಬಾರಿ ಮಾಧ್ಯಮಗಳು ಅಲ್ಲಿಗೆ ಹೋಗುತ್ತಿದ್ದಂತೆ ಆಶ್ರಮಕ್ಕೆ ಬೀಗ ಹಾಕಿ ಓಡಿಹೋಗಿದ್ದ. ಈತನ ಕೆಟ್ಟ ಕೆಲಸಗಳಿಂದಾಗಿ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಗ್ರಾಮದವರು ಈತನನ್ನು ಹುಡುಕಿ ಇದೀಗ ಅಂಕೋಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

ಸ್ವಯಂ ಘೋಷಿತ ಸ್ವಾಮೀಜಿ ಶೇಖರನಿಗೆ ಭಜರಂಗದಳ ಎಚ್ಚರಿಕೆ ನೀಡಿದ್ದಕ್ಕೆ ಕಾವಿ, ರುದ್ರಾಕ್ಷಿ ಬಿಚ್ಚಿ ನಾನು ಇನ್ನು ಮೇಲೆ ಕಾವಿ ತೊಡುವುದಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದಾನೆ. ಇದಲ್ಲದೇ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಇದ್ದ ವೀಡಿಯೋಗಳನ್ನೂ ಡಿಲೀಟ್ ಮಾಡಿದ್ದು, ತನ್ನನ್ನು ಪ್ರಶ್ನಿಸಿದ ಜನರ ವಿರುದ್ಧವೇ ಈಗ ಅಂಕೋಲ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *