ಪೂರ್ವ ಜನ್ಮದ ಕಥೆಕಟ್ಟಿ ಯುವತಿಯ ಹೆಸರಲ್ಲಿ 30 ಲಕ್ಷಕ್ಕೂ ಹೆಚ್ಚು ಲೋನ್ ಪಡೆದ ಸ್ವಾಮೀಜಿ

Public TV
2 Min Read

– ದೂರು ಕೊಟ್ರೆ ಕೈಕಾಲು ಬೀಳಿಸ್ತಾನಂತೆ ಎಂದು ಧಮ್ಕಿ

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಸ್ವಾಮೀಜಿಯೋರ್ವ ಯುವತಿಯೊಬ್ಬಳಿಗೆ ನಾವಿಬ್ಬರು ಕಳೆದ ಮೂರು ಜನ್ಮದಿಂದ ಪತಿ, ಪತ್ನಿಯಾಗಿದ್ದವರು ಎಂದು ಪೂರ್ವ ಜನ್ಮದ ಕಥೆಕಟ್ಟಿ ನಂಬಿಸಿ, ಆಕೆಯ ಹೆಸರಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಬ್ಯಾಂಕುಗಳಲ್ಲಿ ಲೋನ್ ಪಡೆದು ಮೋಸ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ವೆಂಕಟ ಕೃಷ್ಣಾಚಾರ್ಯ(28) ಬಂಧಿತ ಸ್ವಾಮೀಜಿ. ವಾಸ್ತುದೋಷ ನಿವಾರಣೆ ಮಾಡುತ್ತೇನೆ ಎಂದು ಬೆಂಗಳೂರಿನ ವಿಜಯನಗರದ ನಿವಾಸಿ ಚಾರ್ಟೆಡ್ ಅಕೌಂಟೆಂಟ್ ಮನೆಗೆ ಬಂದ ಸ್ವಾಮೀಜಿ ಮೋಸ ಮಾಡಿದ್ದಾನೆ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಎಂದು ಸ್ವಾಮೀಜಿ ಮನೆಯವರಿಗೆ ಪರಿಯಚವಾಗಿದ್ದಾನೆ. ದೋಷ ನಿವಾರಣೆ ಮಾಡುತ್ತೇನೆ ಎಂದು ಮನೆಯಲ್ಲಿ ಹೋಮ ಹವನ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ ಯುವತಿಯೊಂದಿಗೆ ಮೆಬೈಲ್‍ನಲ್ಲಿ ಚಾಟಿಂಗ್ ಮಾಡಿ, ಕಳೆದ ಜನ್ಮದ ಕಥೆ ಕಟ್ಟಿ ನಂಬಿಸಿ ಪಂಗನಾಮ ಹಾಕಿದ್ದಾನೆ.

ಕಳೆದ ಮೂರು ಜನ್ಮದಿಂದ ನಾವಿಬ್ಬರೂ ಗಂಡ ಹೆಂಡತಿಯಾಗಿದ್ದವರು. ಕಳೆದ ಜನ್ಮದಲ್ಲಿ ನೀನೊಬ್ಬಳು ದೊಡ್ಡ ಭರತನಾಟ್ಯದ ಕಲಾವಿದೆಯಾಗಿದ್ದೆ. ನಾನೇ ನಿನ್ನ ಸಾವಿಗೆ ಹಿಂದಿನ ಜನ್ಮದಲ್ಲಿ ಕಾರಣನಾಗಿದ್ದೆ. ಆದರೆ ಈ ಜನ್ಮದಲ್ಲಿ ಕಾರಣಾಂತರಗಳಿಂದ ನಾವಿಬ್ಬರು ದೂರ ಆಗಿದ್ದೇವೆ. ನೀನು ನನ್ನನ್ನ ಮದುವೆಯಾದಾಗ ಮಾತ್ರ ನನಗೆ ಮೋಕ್ಷ ಸಾಧ್ಯ ಎಂದು ಯುವತಿಯನ್ನ ನಂಬಿಸಿದ್ದಾನೆ. ಬಳಿಕ ಬೇರೆ ಬೇರೆ ಬ್ಯಾಂಕ್‍ಗಳಿಂದ ಯುವತಿಯ ಹೆಸರಲ್ಲಿ 30 ಲಕ್ಷಕ್ಕೂ ಹೆಚ್ಚು ಲೋನ್ ಪಡೆದಿದ್ದಾನೆ. ಅಷ್ಟೇ ಅಲ್ಲದೆ ಈ ಬಗ್ಗೆ ಯುವತಿ ಪ್ರಶ್ನಿಸಿದಾಗ, ಪೊಲೀಸರಿಗೆ ದೂರು ಕೊಟ್ಟರೆ ಕೈಕಾಲು ಬಿದ್ದೋಗುವಂತೆ ಮಾಡಿತ್ತೇನೆ ಎಂದು ಈ ಸೈಕೋ ಸ್ವಾಮೀಜಿ ಯುವತಿಯನ್ನು ಹಾಗೂ ಆಕೆಯ ಪೋಷಕರಿಗೆ ಧಮ್ಕಿ ಹಾಕಿದ್ದಾನೆ.

ಜೊತೆಗೆ ಯುವತಿಯ ಬ್ಯಾಗ್‍ನಲ್ಲಿ ನಿಂಬೆಹಣ್ಣು, ತಾಯತ, ಹೆಣ್ಣಿನ ಗೊಂಬೆ, ಕರ್ಪೂರವನ್ನು ಆರೋಪಿ ಇಟ್ಟಿದ್ದಾನೆ. ವ್ಯಾನಿಟಿ ಬ್ಯಾಗ್‍ನಲ್ಲಿ ಇವನ್ನೆಲ್ಲಾ ಯಾವಾಗಲೂ ಇಟ್ಟುಕೊಂಡೇ ತೆರಳಬೇಕು ಎಂದು ಸೂಚಿಸಿದ್ದಾನೆ. ಈ ಡೋಂಗಿ ಸ್ವಾಮೀಜಿಗೆ ಹೆದರಿಕೊಂಡು ಆತನ ಮಾತನ್ನ ಯುವತಿ ಚಾಚುತಪ್ಪದೇ ಪಾಲಿಸುತ್ತಿದ್ದಳು.

ಇದನ್ನೆಲ್ಲಾ ಕಂಡ ಯುವತಿ ಪೋಷಕರು ಸ್ವಾಮೀಜಿಯ ಕಾಟ ತಾಳಲಾರದೇ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

https://www.youtube.com/watch?v=f_n8bTvVmvI

Share This Article
Leave a Comment

Leave a Reply

Your email address will not be published. Required fields are marked *