ನಕಲಿ ಪೊಲೀಸರನ್ನು ಕಳುಹಿಸಿ ಸ್ನೇಹಿತನ ಮನೆ ರಾಬರಿ – ಸ್ಟ್ಯಾಂಪ್‌ ವೆಂಡರ್ ಅರೆಸ್ಟ್

1 Min Read

ಬೆಂಗಳೂರು: ನಕಲಿ ಪೊಲೀಸರನ್ನು ಕಳುಹಿಸಿ ಮನೆ ದರೋಡೆ (Robbery) ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ನೇಹಿತನ ಮನೆ ರಾಬರಿ ಮಾಡಿಸಿದ ಸ್ಟ್ಯಾಂಪ್‌ ವೆಂಡರ್ (Stamp Vendor) ಅರೆಸ್ಟ್ ಆಗಿದ್ದಾನೆ.

ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬೇಗೌಡರ ಮನೆಗೆ ನಕಲಿ ಸಬ್ ಇನ್ಸ್‌ಪೆಕ್ಟರ್ (Fake Sub Inspector) ಕಳುಹಿಸಿ ಮಾಡಿಸಿ ದರೋಡೆ ಮಾಡಲಾಗಿತ್ತು. ಸ್ನೇಹಿತನ ಸೈಟ್ ಮಾರಾಟದ ಹಣಕ್ಕಾಗಿ ನಕಲಿ ಸಬ್ ಇನ್ಸ್‌ಪೆಕ್ಟರ್ ವೇಷಧಾರಿಗಳ ಮೂಲಕ ದರೋಡೆ ಮಾಡಿಸಿದ್ದ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಈಗ ಬಂಧಿಸಿದ್ದಾರೆ.

ದರೋಡೆ ಹೇಗೆ?
ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರ ಎಂಬಾತನಿಗೆ ಕರೆ ಮಾಡಿ, ನನ್ನ ಬಳಿಯೇ ಹೊಂಬೇಗೌಡ ಪೇಪರ್ ಮಾಡಿಸಿ ಸೈಟ್ ಮಾರಿದ್ದಾನೆ. ಮನೆಯಲ್ಲಿ ಸಾಕಷ್ಟು ಹಣವಿದೆ. ದರೋಡೆ ಮಾಡಿ ಎಂದು ಬೆಟ್ಟೇಗೌಡ ಸೂಚಿಸಿದ್ದ.

ಬೆಟ್ಟೇಗೌಡನ ಸೂಚನೆಯಂತೆ ನಾಗೇಂದ್ರ, ಶಿವಾಜಿನಗರದಲ್ಲಿ ಶೂಟಿಂಗ್‌ಗಾಗಿ ಬಳಸುವ ಸಬ್ ಇನ್ಸ್‌ಪೆಕ್ಟರ್ ಸಮವಸ್ತ್ರವನ್ನು ಬಾಡಿಗೆಗೆ ತಂದಿದ್ದ. ಪೊಲೀಸ್ ಸಮವಸ್ತ್ರದಲ್ಲಿಯೇ ಹೊಂಬೇಗೌಡರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿದ್ದನು.

 

ಪೊಲೀಸ್ ತನಿಖೆ ವೇಳೆ ಆರೋಪಿಗಳು ಕಳೆದ ಎರಡು ವರ್ಷಗಳಲ್ಲಿ 20 ಲಕ್ಷ ರೂ. ವಸೂಲಿ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಬೆಟ್ಟೇಗೌಡ ನೀಡಿದ ಮಾಹಿತಿ ಮೇರೆಗೆ ‘ಕುಣಿಗಲ್ ಗಿರಿ’ ಹೆಸರಿನಲ್ಲಿ ಈ ಹಣ ವಸೂಲಿ ಮಾಡಲಾಗಿತ್ತು. ಹೊಂಬೇಗೌಡ ಪ್ರತಿ ಬಾರಿ ಸೈಟ್ ರಿಜಿಸ್ಟರ್ ಮಾಡಿದಾಗಲೂ ಕುಣಿಗಲ್ ಗಿರಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿತ್ತು.

ಕಳೆದ ಬಾರಿ ಹೊಂಬೇಗೌಡರಿಗೆ 1.5 ಕೋಟಿ ರೂಪಾಯಿ ಬಂದಿದೆ ಎಂದು ಬೆಟ್ಟೇಗೌಡನೇ(Bettegowda) ಮಾಹಿತಿ ನೀಡಿದ್ದಾನೆ. ಈ ಹಿಂದೆ ನಾಗೇಂದ್ರ ಹಾಗೂ ಬಚ್ಚನ್‌ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಪ್ರಮುಖ ಆರೋಪಿ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡನನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.

ಸದ್ಯ ಬಂಧಿತರಿಂದ 570 ಗ್ರಾಂ ಚಿನ್ನಾಭರಣ ಹಾಗೂ 14 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜೈಲಿನಲ್ಲಿರುವ ಬಚ್ಚನ್ ಕೂಡ ಈ ದರೋಡೆಗೆ ಯೋಜನೆಯನ್ನು ರೂಪಿಸಿದ್ದನು ಎಂದು ತಿಳಿದುಬಂದಿದೆ. ಸದ್ಯ ನಾಗೇಂದ್ರ, ಬೆಟ್ಟೇಗೌಡ ಮತ್ತು ಬಚ್ಚನ್ ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

Share This Article