ಅದು ಫೇಕ್ ಡೈರಿ: ಯಾರು ಹೇಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು?

Public TV
2 Min Read

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಈ ಷಡ್ಯಂತ್ರದಲ್ಲಿ ರಾಜ್ಯ ಬಿಜೆಪಿ ಜೊತೆ ಕೇಂದ್ರದ ಬಿಜೆಪಿಯೂ ಕೈಜೋಡಿಸಿದೆ. ಆದರೆ ಬಿಜೆಪಿಯವರು ತಮ್ಮ ಷಡ್ಯಂತ್ರದಲ್ಲಿ ಯಶಸ್ವಿಯಾಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿಯ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಿಎಂ ಕಪ್ಪ ಕೊಟ್ಟಿರುವ ಬಗ್ಗೆ ಡೈರಿ ಆಧಾರರಹಿತವಾಗಿ ಬಿಜೆಪಿ ಆರೋಪಿಸುತ್ತದೆ ಎಂದು ತಿರುಗೇಟು ನೀಡಿದರು.

ಸಮನ್ವಯ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ನಾಲ್ಕು ವರ್ಷ ಪೂರೈಸಿರುವ ಸಚಿವರನ್ನು ಕೈ ಬಿಡುವ ಪ್ರಶ್ನೆಯಿಲ್ಲ. ಇದು ಮಾಧ್ಯಮದವರ ಸೃಷ್ಟಿ ಎಂದು ಸಿಎಂ ಹೇಳಿದರು.

ಕೇಂದ್ರಕ್ಕೆ ಸವಾಲು: ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೇಕ್ ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದು, ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಬಿಡುಗಡೆ ಮಾಡಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸವಾಲು ಹಾಕಿದರು.

ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಆಲೋಚಿಸದೇ ಆಧಾರ ಇಲ್ಲದ ಸುಳ್ಳು ಡೈರಿ ಇಟ್ಟುಕೊಂಡು ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಲೆಹರ್ ಸಿಂಗ್ ಮನೆಯಲ್ಲಿ ಸಿಕ್ಕ ಡೈರಿ ಬಗ್ಗೆ ಯಾಕೆ ಬಿಜೆಪಿ ಮಾತನಾಡುತ್ತಿಲ್ಲ. ಮೋದಿ ಗುಜರಾತ್ ಸಿಎಂ ಆದಾಗ ಸಹರಾ ಬಿರ್ಲಾ ಕಂಪನಿಯಿಂದ ಪಡೆದ 40 ಕೋಟಿ ಡೈರಿಯ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ ಯಾಕೆ? ಅನಂತಕುಮಾರ್ ಬಿಎಸ್‍ವೈ ಮಾತನಾಡಿರುವ ಸಿಡಿ ಬಗ್ಗೆ ಮಾತಾನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ತನಿಖೆ ನಡೆಸಲು ಕೇಂದ್ರಕ್ಕೆ ಅಧಿಕಾರವಿದ್ದು, ಸರ್ಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಫೇಕ್ ಡೈರಿ: ಕಪ್ಪ ಕೊಟ್ಟಿರುವ ಡೈರಿ ಪ್ರಕರಣ ತುಂಬಾ ಹಳೆಯದು. ಗೋವಿಂದ ರಾಜು ಅವರು ಏನು ತಪ್ಪು ಮಾಡಿಲ್ಲ. ನನಗೆ ಈ ಹಿಂದೆಯೇ ಐಟಿ ಡೈರಿ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿತ್ತು. ಇದು ಫೇಕ್ ಡೈರಿ. ಆ ಬಗ್ಗೆ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದೆ. ರೇಡ್ ಆಗಿ ಒಂದು ಐಟಿ ನೋಟಿಸ್ ಜಾರಿ ಆದ್ರೆ ನಾವು ತಪ್ಪಿತಸ್ಥರೇ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಈ ರೀತಿಯ ಡೈರಿ ನೂರು ಬರಲಿ ಕಾಂಗ್ರೆಸ್ಸಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಅವರಿಗೆ ಅವರ ಯೋಜನೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲಿ. ನಾವು ನಮ್ಮ ಹೋರಾಟ ಮಾಡುತ್ತೇವೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಪಕ್ಷ ಏನು ಕೆಲಸ ಕೊಡುತ್ತದೆ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

ಶಿಸ್ತಿನ ಸಿಪಾಯಿ: ಹಿರಿಯ ಸಚಿವರನ್ನ ಸಂಪುಟದಿಂದ ಕೈ ಬಿಡುವ ವಿಚಾರದ ಬಗ್ಗೆ ಮಾತನಾಡಿ, ಪಕ್ಷದಲ್ಲಿ ನಾವು ಶಿಸ್ತಿನ ಸಿಪಾಯಿಗಳಾಗಿದ್ದು, ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಸರ್ಕಾರದ ಅಸ್ತಿತ್ವ ಕೆಡಿಸಲು ಬಿಜೆಪಿ ಯತ್ನಿಸುತ್ತಿದ್ದು. ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದರು.

ಬಿಜೆಪಿಯ ಆರೋಪಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಸಚಿವರನ್ನು ತೆಗೆಯುವುದು, ಬಿಡುವುದು ಸಿಎಂಗೆ ಸೇರಿದ್ದು. ನಾನು ಶಿಸ್ತಿನ ಸಿಪಾಯಿಯಾಗಿದ್ದು ನಾನು ಸರ್ಕಾರದ ಕೆಲಸಕ್ಕೂ ಸಿದ್ಧ. ಪಕ್ಷದ ಕೆಲಸಕ್ಕೂ ಬದ್ಧವಾಗಿದ್ದೇನೆ. ಸಚಿವರನ್ನು ಕೈಬಿಡುವ ವಿಚಾರ ಊಹಾಪೋಹವಾಗಿದ್ದು ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಸಮನ್ವಯ ಸಮಿತಿ ಸಭೆ ಡೈರಿಗಾಗಿ ಕರೆದಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *