ಛತ್ತೀಸ್‍ಗಢದಲ್ಲಿ ನಕಲಿ ಎಸ್‍ಬಿಐ ಬ್ರಾಂಚ್ ತೆರೆದು ವಂಚನೆ – ಮೂವರು ಅರೆಸ್ಟ್

Public TV
1 Min Read

ರಾಯ್‍ಪುರ: ಛತ್ತೀಸ್‍ಗಢದ (Chhattisgarh) ಶಕ್ತಿ ಜಿಲ್ಲೆಯಲ್ಲಿ ಕಿಡಿಗೇಡಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೆಸರಲ್ಲಿ ನಕಲಿ ಶಾಖೆಯೊಂದನ್ನು ತೆರೆದು ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಮಲ್ಖರೌಡ ಪೊಲೀಸ್ ಠಾಣಾ ವ್ಯಾಪ್ತಿಯ ಛಪೋರಾ ಗ್ರಾಮದಲ್ಲಿ ಬ್ಯಾಂಕ್‍ನ ನಕಲಿ ಶಾಖೆಯನ್ನು ನಡೆಸಲಾಗುತ್ತಿತ್ತು. ನಕಲಿ ಬ್ಯಾಂಕ್ ಘಟಕವನ್ನು ಸೆಪ್ಟೆಂಬರ್ 18 ರಂದು ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಅಂಗಡಿಯಲ್ಲಿ ಸ್ಥಾಪಿಸಲಾಗಿತ್ತು. ಈ ಸಂಬಂಧ ಪೊಲೀಸರು (Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಬೀದರ್| ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ ಅಮಾನತು

ಈ ಘಟಕದ ಬಗ್ಗೆ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಕೊರ್ಬಾದಲ್ಲಿರುವ ಎಸ್‍ಬಿಐನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ತಂಡ ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ.

ನಕಲಿ ಶಾಖೆಯಲ್ಲಿ ಐವರು ನೌಕರರು ಕೆಲಸ ಮಾಡುತ್ತಿದ್ದರು. ಅವರನ್ನು ಸಂದರ್ಶನಗಳ ಮೂಲಕ ನೇಮಿಸಿಕೊಳ್ಳಲಾಗಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಶಾಖೆಯಿಂದ ಕಂಪ್ಯೂಟರ್ ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ನಕಲಿ ಶಾಖೆಯಲ್ಲಿ ಎಷ್ಟು ಮಂದಿ ಖಾತೆ ತೆರೆದಿದ್ದಾರೆ ಮತ್ತು ಅವರಿಂದ ಎಷ್ಟು ಹಣವನ್ನು ವಸೂಲಿ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‍ಎಸ್) ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

Share This Article