ಕಾಂಗ್ರೆಸ್ಸಿಗೆ ಸೇರಿದ 687 ಫೇಸ್‍ಬುಕ್ ಖಾತೆ, ಪೇಜ್‍ಗಳು ರದ್ದು!

Public TV
2 Min Read

– ಬಿಜೆಪಿಯ 15 ನಕಲಿ ಖಾತೆ, ಪೇಜ್‍ಗಳ ಮೇಲೂ ಕ್ರಮ

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿರೋಧ ಪಕ್ಷಗಳನ್ನು ಟೀಕಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಕಾಂಗ್ರೆಸ್ ಐಟಿ ಸೆಲ್‍ಗೆ ಲಿಂಕ್ ಆಗಿದ್ದ ಸುಮಾರು 687 ಪೇಜ್‍ಗಳನ್ನು ಮತ್ತು ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಫೇಸ್‍ಬುಕ್ ಸೋಮವಾರ ತಿಳಿಸಿದೆ.

ಈ ಪೇಜ್‍ಗಳು ಮತ್ತು ಅಕೌಂಟ್‍ಗಳ ಪರಸ್ಪರ ಸಹಕಾರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡಲಾಗುತ್ತಿತ್ತು. ಹಾಗೆಯೇ ಕಾಂಗ್ರೆಸ್, ಬಿಜೆಪಿ ವಿರುದ್ಧ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದೆ ಎಂದು ಕಮಲ ನಾಯಕರು ಆರೋಪಿಸಿದ್ದರು. ಆದ್ದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಫೇಸ್‍ಬುಕ್ ತಿಳಿಸಿದೆ.

ಈ ಫೇಜ್ ಮತ್ತು ಅಕೌಂಟ್‍ಗಳ ವಿರುದ್ಧ ತನಿಖೆ ನಡೆಸಿದಾಗ, ಈ ಖಾತೆ ಹಾಗೂ ಪೇಜ್‍ಗಳ ಬಳಕೆದಾರರು ನಕಲಿ ಅಕೌಂಟ್‍ಗಳನ್ನು ಸೃಷ್ಟಿಸಿಕೊಂಡು ತಮ್ಮ ಸಂದೇಶಗಳನ್ನು ವಿವಿಧ ಗುಂಪುಗಳಿಗೆ ಪೋಸ್ಟ್ ಮಾಡುತ್ತಿರುವುದು ಪತ್ತೆಯಾಗಿದೆ. ಅವರ ಪೋಸ್ಟ್ ಗಳಲ್ಲಿ ಸ್ಥಳೀಯ ಸುದ್ದಿಗಳು ಮತ್ತು ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಪಪ್ರಚಾರ, ಟೀಕೆಗಳನ್ನು ಮಾಡಲಾಗುತ್ತಿತ್ತು ಎಂದು ಫೇಸ್‍ಬುಕ್ ಪತ್ತೆ ಮಾಡಿದೆ.

ಈ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಮರೆಮಾಚಲು ಪ್ರಯತ್ನಿಸಿದ್ದರು. ಹೀಗಾಗಿ ಇದರ ಬಗ್ಗೆ ಹೆಚ್ಚಿನ ಪರಿಶೀಲನೆಯಿಂದ ಇವರೆಲ್ಲರಿಗೂ ಕಾಂಗ್ರೆಸ್ ಸಂಪರ್ಕ ಇರುವುದು ಖಚಿತಪಟ್ಟಿತು ಎಂದು ಫೇಸ್‍ಬುಕ್‍ನ ಸೈಬರ್ ಭದ್ರತಾ ನೀತಿ ವಿಭಾಗದ ಮುಖ್ಯಸ್ಥ ನಾಥನ್‍ನೀಲ್ ಗ್ಲೆಷರ್ ಸ್ಪಷ್ಟಪಡಿಸಿದ್ದಾರೆ.

ಸದ್ಯ ಈ ಸಂಬಂಧ ಕಾಂಗ್ರೆಸ್ ಐಟಿ ಸೆಲ್‍ಗೆ ಲಿಂಕ್ ಆಗಿದ್ದು ಸುಮಾರು 549 ನಕಲಿ ಖಾತೆ ಹಾಗೂ 138 ನಕಲಿ ಪೇಜ್‍ಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಅಲ್ಲದೆ ಬಿಜೆಪಿಗೆ ಸಂಬಂಧಿಸಿದ ಸುಮಾರು 15 ನಕಲಿ ಖಾತೆ, ಪೇಜ್‍ಗಳ ಮೇಲೂ ಕ್ರಮ ಕೈಗೊಂಡಿದೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಫೇಸ್‍ಬುಕ್‍ಗೆ ಟ್ವೀಟ್ ಮಾಡಲಾಗಿದೆ. ಫೇಸ್‍ಬುಕ್ ಕಾಂಗ್ರೆಸ್ಸಿನ ಯಾವುದೇ ಅಧಿಕೃತ ಖಾತೆಗಳನ್ನು ರದ್ದು ಮಾಡಿಲ್ಲ. ಹಾಗೆಯೇ ನಮ್ಮ ಪರಿಶೀಲಿಸಲಾದ ಕಾರ್ಯಕರ್ತರು ಬಳಸುವ ಯಾವುದೇ ಖಾತೆ, ಪೇಜ್‍ಗಳು ಕೂಡ ರದ್ದಾಗಿಲ್ಲ. ಆದ್ದರಿಂದ ಫೇಸ್‍ಬುಕ್ ರದ್ದುಗೊಳಿಸಿರುವ ಖಾತೆ, ಪೇಜ್‍ಗಳ ಪಟ್ಟಿಯನ್ನು ನೀಡಬೇಕು. ಈ ಮನವಿಗೆ ಫೇಸ್‍ಬುಕ್ ನೀಡುವ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಲಾಗಿದೆ.

ಆದ್ರೆ ಫೇಸ್‍ಬುಕ್ ಮಾತ್ರ, ನಾವು ಈಗಾಗಲೇ ರದ್ದುಗೊಳಿಸಿರುವ ಬಳಕೆದಾರರ ಅಸಂಬದ್ಧ ಚಟುವಟಿಕೆಗಳನ್ನು ನೋಡಿ ನಕಲಿ ಪೇಜ್, ಖಾತೆಗಳ ಮೇಲೆ ಕ್ರಮ ಕೈಗೊಂಡಿದ್ದೆವೆ. ಅವರು ಮಾಡಿರುವ ಪೋಸ್ಟ್‍ಗಳ ವಿಷಯಗಳನ್ನು ನೋಡಿ ಅಲ್ಲ. ನಾವು ತನಿಖೆ ನಡೆಸಿ ನಕಲಿ ಬಳಕೆದಾರರ ಖಾತೆ ಎಂದು ಸ್ಪಷ್ಟವಾದ ಮೆಲೇಯೇ ರದ್ದು ಮಾಡಿದ್ದೇವೆ ಎಂದು ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *