2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಅನುಮಾನ- ಟಾಯ್ಲೆಟ್‍ನಲ್ಲಿದ್ದ ಕಿಟಕಿಗೆ ಕಂಬಿ ಇರ್ಲಿಲ್ಲ

Public TV
3 Min Read

 

ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ನಡೆದ 2ನೇ ತರಗತಿ ಬಾಲಕನ ಕೊಲೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಅದರಲ್ಲೂ ಶಾಲೆಯ ಟಾಯ್ಲೆಟ್‍ನಲ್ಲಿ ಪೊಲೀಸರು ಕಂಬಿಯಿಲ್ಲದ ಮೂರು ಕಿಟಕಿಗಳನ್ನ ಪತ್ತೆ ಹಚ್ಚಿದ ನಂತರ ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ಲೈಂಗಿಕ ಕ್ರಿಯೆ ಒಪ್ಪದ್ದಕ್ಕೆ ಕೊಲೆ ಮಾಡಿರುವುದಾಗಿ ಆತ ಕೂಡ ಒಪ್ಪಿಕೊಂಡಿದ್ದಾನೆ. ಆದರೂ ಬೇರೆ ಯಾರೋ ಕೊಲೆ ಮಾಡಿ ಆ ಕಿಟಕಿ ಮೂಲಕ ತಪ್ಪಿಸಿಕೊಂಡು ಹೋಗಿರಬಹುದಾ ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ಬಾಲಕ ಪ್ರದ್ಯುಮನ್‍ನ ತಂದೆ ವರುಣ್ ಠಾಕೂರ್ ತಮ್ಮ ಮಗನನ್ನು ಶುಕ್ರವಾರ ಬೆಳಿಗ್ಗೆ 7.55 ಕ್ಕೆ ಮಗನನ್ನು ಶಾಲೆಗೆ ಡ್ರಾಪ್ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಬಸ್ ಡ್ರೈವರ್ ಸೌರಭ್ ರಾಘವ್ ಕೂಡ ಅದೇ ಸಮಯಕ್ಕೆ ಶಾಲೆ ತಲುಪಿದ್ದು, ಕಂಡಕ್ಟರ್ ಅಶೋಕ್ ಕುಮಾರ್ ಬಸ್‍ನಲ್ಲಿದ್ದ ಮಕ್ಕಳನ್ನ ಕೆಳಗಿಳಿಸಿದ್ದಾನೆ. ಇದಕ್ಕೆ ಕೆಲವು ನಿಮಿಷಗಳು ಹಿಡಿದಿರುತ್ತದೆ. ಹಾಗೇ ರಾಘವ್ ಬಸ್ ಪಾರ್ಕ್ ಮಾಡಲು ಕೂಡ ಅಶೋಕ್ ಕುಮಾರ್ ಸಹಾಯ ಮಾಡಿದ್ದು ಇದಕ್ಕೂ ಸ್ವಲ್ಪ ಸಮಯ ಹಿಡಿದಿರುತ್ತದೆ.

ಪ್ರದ್ಯುಮನ್‍ನ ಶಾಲಾ ಬ್ಯಾಗ್ ಟಾಯ್ಲೆಟ್‍ನಲ್ಲೇ ಪತ್ತೆಯಾಗಿದೆ. ಹೀಗಾಗಿ ಆತ ಶಾಲೆಯ ಗೇಟ್‍ನಿಂದ ನೇರವಾಗಿ ಟಾಯ್ಲೆಟ್‍ಗೆ ಬಂದಿದ್ದಾನೆ ಎಂಬುದನ್ನು ಸೂಚಿಸಿದ್ದು, ಬಳಿಕ ಆತನ ಮೇಲೆ ಕೊಲೆಗಾರ ದಾಳಿ ಮಾಡಿ ಕಿಟಕಿ ಮೂಲಕ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ

ಘಟನೆ ನಡೆದ ದಿನ ಪೊಲೀಸರು ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥರಾದ ಫ್ರಾನ್ಸಿಸ್ ಥಾಮಸ್ ಹಾಗು ಶಾಲೆಯ ಹೆಚ್‍ಆರ್ ಮುಖ್ಯಸ್ಥರಾದ ಜೇಯಸ್ ಥಾಮಸ್‍ರನ್ನು ಜುವೆನೈಲ್ ಜಸ್ಟಿಸ್ ಆ್ಯಕ್ಟ್ ಅಡಿ ಬಂಧಿಸಿದ್ದರು. ನಂತರ ಅವರನ್ನ ಸೊಹ್ನಾ ಕೋರ್ಟ್ ಮುಂದೆ ಹಾಜರುಪಡಿಸಲಾಯ್ತು. ಕೋರ್ಟ್ ಇಬ್ಬರನ್ನೂ ಎರಡು ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿತ್ತು.

ಆರ್ಯನ್ ಸಂಸ್ಥೆಯ ಎಂಡಿ ಹಾಗೂ ಅಧ್ಯಕ್ಷರಾದ ಆರ್ಯನ್ ಪಿಂಟೋ ಹಾಗೂ ಇನ್ನಿತರ ಅಧಿಕಾರಿಗಳನ್ನ ವಿಚಾರಣೆ ಮಾಡಲು ನಾವು ನಾಲ್ವರು ಸದಸ್ಯರ ತಂಡವನ್ನು ಮುಂಬೈಗೆ ಕಳಿಸಿದ್ದೇವೆ ಎಂದು ಗುರ್ಗಾಂವ್ ಪೊಲೀಸ್ ಆಯುಕ್ತರಾದ ಸಂದೀಪ್ ಖಿರ್ವಾರ್ ಹೇಳಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿ ಸಾಕ್ಷಿ ನಾಶ ಮಾಡಲು ಯತ್ನಿಸಿದೆ. ನೆಲದ ಮೇಲಿನ ರಕ್ತವನ್ನ ಸ್ವಚ್ಛ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಗುರ್ಗಾವ್ ನಾಗರೀಕ ಆಡಳಿತ ರಚಿಸಿರುವ ಮೂರು ಸದಸ್ಯರ ಸಮಿತಿ ಸೋಮವಾರದಂದು ಉಪ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಶಾಲೆಯ 5 ವೈಫಲ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಮುರಿದ ಕಿಟಕಿ, ಅಗ್ನಿನಿಯಂತ್ರಕಗಳಲ್ಲಿ ದೋಷ, ಮುರಿದ ಕಾಂಪೌಂಡ್, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗೆ ಒಂದೇ ಟಾಯ್ಲೆಟ್ ಹಾಗೂ ಸಿಸಿಟಿವಿ ಗುಣಮಟ್ಟದಲ್ಲಿನ ದೋಷದ ಬಗ್ಗೆ ಹೇಳಲಾಗಿದೆ ಎಂದು ಗುರ್ಗಾಂವ್ ಉಪ ಆಯುಕ್ತಾರದ ವಿನಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಮುಂದಿನ ಕ್ರಮಕ್ಕಾಗಿ ಸಿಂಗ್ ಅವರು ಈ ವರದಿಯನ್ನ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ. ಈಗ ಶಿಕ್ಷಣ ಇಲಾಖೆಯ ಮುಂದೆ 3 ಆಯ್ಕೆಗಳಿವೆ. ಶಾಲಾ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು, ಶಾಲೆಯ ಲೈಸೆನ್ಸ್ ರದ್ದು ಮಾಡುವುದು ಹಾಗೂ ಒಂದೊಂದು ದೋಷಕ್ಕೂ 25 ಸಾವಿರ ರೂ. ದಂಡ ವಿಧಿಸುವುದು. ಮೂಲಗಳ ಪ್ರಕಾರ ಶಿಕ್ಷಣ ಇಲಾಖೆ ಶಾಲೆಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಇತರೆ ಶಾಲೆಗಳಿಗೆ ಬಲವಾದ ಸಂದೇಶ ರವಾನಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಮತ್ತೊಂದು ಕಡೆ ಮಕ್ಕಳ ಹಕ್ಕು ರಕ್ಷಣೆಯ ರಾಷ್ಟ್ರ ಸಮಿತಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನ ಪರಿಗಣಿಸಿದ್ದು, ಗುರ್ಗಾಂವ್‍ನ ಉಪ ಆಯುಕ್ತರು ಹಾಗೂ ಹರ್ಯಾಣ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಿಬಿಎಸ್‍ಸಿ ಅಧ್ಯಕ್ಷರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕ್ರಮದ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಪತ್ರ ಬರೆದಿದೆ. ಅಲ್ಲದೆ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.

ಈ ಪ್ರಕರಣ ಮುಂದೆ ಮತ್ತ್ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *