ರಾಜ್‌ಕೋಟ್‌ ಅಗ್ನಿ ದುರಂತಕ್ಕೆ 25 ಸಾವು – ತುಂಬಾ ನೊಂದಿದ್ದೇನೆ ಎಂದು ಮೋದಿ ಸಂತಾಪ!

Public TV
2 Min Read

– ಸಂತ್ರಸ್ತರಿಗೆ ಅಗತ್ಯ ನೆರವು ಸಿಗಲಿದೆ ಎಂದ ಪ್ರಧಾನಿ
– ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

ಗಾಂಧಿನಗರ: ಗುಜರಾತ್‌ ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ (Rajkot Gaming Zone) ಶನಿವಾರ ಸಂಜೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಕಂಡು ತೀವ್ರ ನೊಂದಿದ್ದೇನೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇದೆ. ಮೃತರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸ್ಥಳೀಯ ಆಡಳಿತ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ಸಾವಿನ ಸಂಖ್ಯೆ 25ಕ್ಕೆ ಏರಿಕೆ:
ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Rajkot Fire Incident) ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಸುಮಾರು 20 ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಬೆಂಕಿ ಅವಘಡ ಸಂಬಂಧ ತನಿಖೆ ನಡೆಸಲಾಗುವುದು. ಗೇಮಿಂಗ್ ವಲಯವು ಯುವರಾಜ್ ಸಿಂಗ್ ಸೋಲಂಕಿ ಎಂಬ ವ್ಯಕ್ತಿಯ ಮಾಲೀಕತ್ವದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ಸದ್ಯಕ್ಕೆ ನಗರದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚುವಂತೆ ಸಂದೇಶ ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

Share This Article