ಇತ್ತೀಚೆಗೆ ಇರಾನ್ (Iran), ಇಸ್ರೇಲ್‌ನ (Israel) ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿ ಸ್ವದೇಶಿ ನಿರ್ಮಿತ ‘ಸೆಜ್ಜಿಲ್’ ಎಂಬ ‘ಡ್ಯಾನ್ಸಿಂಗ್ ಮಿಸೈಲ್’ನ್ನು (Dancing Missile) ಪ್ರಯೋಗಿಸಿತ್ತು. ಈ ಮಿಸೈಲ್ ಇಡೀ ಜಗತ್ತಿನ ಗಮನವನ್ನೇ ಸೆಳೆದಿದೆ. ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೆಜ್ಜಿಲ್ ಮಿಸೈಲ್‌ನ ಸಾಮರ್ಥ್ಯವೇನು? ವಿಶೇಷತೆ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಏನಿದು ಸೆಜ್ಜಿಲ್ ಕ್ಷಿಪಣಿ?
ಸೆಜ್ಜಿಲ್-2 ಇರಾನ್ನಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎರಡು ಹಂತಗಳ ಘನ ಇಂಧನ ಬಳಸುವ ಮಧ್ಯಮ ದೂರದ ಬಾಲಿಸ್ಟಿಕ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯ ಅಂದಾಜು ವ್ಯಾಪ್ತಿ ಸುಮಾರು 2,000 ಕಿಲೋಮೀಟರ್ ಆಗಿದ್ದು, ಸುಮಾರು 700 ಕೆಜಿ ತೂಕದ ಪೇಲೋಡ್ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: PublicTV Explainer: ಪೈಪ್‌ಗಳು v/s ಸಿಲಿಂಡರ್‌ಗಳು – ಎಲ್‌ಪಿಜಿ ಬಿಕ್ಕಟ್ಟಿಗೆ ಪಿಎನ್‌ಜಿ ಪರಿಹಾರ?
ಡ್ಯಾನ್ಸಿಂಗ್ ಮಿಸೈಲ್ – ಈ ಹೆಸರೇಕೆ?
ಈ ಮಿಸೈಲ್ ಶಬ್ದಕ್ಕಿಂತ ಸುಮಾರು 13 ಪಟ್ಟು ಹೆಚ್ಚು ವೇಗವಾಗಿ (Mach 13+) ಚಲಿಸಬಲ್ಲದು. ಅದರಲ್ಲೂ, ಉಡಾವಣೆಯ ನಂತರ ತನ್ನ ಪಥವನ್ನು ಬದಲಿಸುವ (Maneuverability) ಸಾಮರ್ಥ್ಯ ಇರುವುದರಿಂದ ಇದಕ್ಕೆ ‘ಡಾನ್ಸಿಂಗ್ ಮಿಸೈಲ್’ ಎಂಬ ಹೆಸರು ಸಹ ಇದೆ. ಇದೇ ಕಾರಣಕ್ಕೆ ಇಸ್ರೇಲ್‌ನ ‘ಐರನ್ ಡೋಮ್’ನಂತಹ ರಕ್ಷಣಾ ವ್ಯವಸ್ಥೆಗೂ ಇದನ್ನೂ ಪತ್ತೆಹಚ್ಚುವುದು ಕಷ್ಟಕರವಾಗಿದೆ.
ಸೆಜ್ಜಿಲ್ ವಿಶೇಷತೆ ಏನು?
ಘನ ಇಂಧನ ತಂತ್ರಜ್ಞಾನ: ಸೆಜ್ಜಿಲ್ ಕ್ಷಿಪಣಿ ಎರಡು ಹಂತದ ಘನ ಇಂಧನ ಎಂಜಿನ್ ಹೊಂದಿದೆ. ಅದರಂತೆ, ಹಳೆಯ ದ್ರವ ಇಂಧನ ಕ್ಷಿಪಣಿಗಳಿಗಿಂತ ಇದು ವೇಗವಾಗಿ ಉಡಾವಣೆಗೆ ಸಿದ್ಧವಾಗುತ್ತದೆ ಮತ್ತು ಇದನ್ನು ರಹಸ್ಯವಾಗಿ ಸಂಗ್ರಹಿಸಿಡುವುದು ಸುಲಭವಾಗಿದೆ.
ವ್ಯಾಪ್ತಿ: ಈ ಕ್ಷಿಪಣಿಯು ಸುಮಾರು 2,000 ರಿಂದ 2,500 ಕಿಲೋಮೀಟರ್‌ಗಳಷ್ಟು ದೂರದ ಗುರಿಯನ್ನು ತಲುಪಬಲ್ಲದು. ಅಂದರೆ ಇದು ಇರಾನ್‌ನಿಂದ ನೇರವಾಗಿ ಇಸ್ರೇಲ್, ಇಡೀ ಮಧ್ಯಪ್ರಾಚ್ಯ ಮತ್ತು ಯುರೋಪಿನ ಕೆಲವು ಭಾಗಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ.
ಸಿಡಿತಲೆ ಸಾಮರ್ಥ್ಯ: ಇದು ಸುಮಾರು 700 ರಿಂದ 1,000 ಕೆಜಿ ತೂಕದ ಸ್ಫೋಟಕಗಳನ್ನು ಅಥವಾ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು.
ವೈಶಿಷ್ಟ್ಯಗಳು: ಇದರ ಉದ್ದ ಸುಮಾರು 18 ಮೀಟರ್ ಮತ್ತು ತೂಕ ಸರಿಸುಮಾರು 23,600 ಕೆಜಿ ಇದೆ. ಇದನ್ನು ಮೊಬೈಲ್ ಲಾಂಚರ್‌ಗಳ ಮೂಲಕ ಎಲ್ಲಿಂದ ಬೇಕಾದರೂ ಉಡಾವಣೆ ಮಾಡಬಹುದು. ಈ ಕ್ಷಿಪಣಿಯು ಇರಾನ್‌ನ ಅತ್ಯಂತ ಅಪಾಯಕಾರಿ ಮತ್ತು ತಾಂತ್ರಿಕವಾಗಿ ಮುಂದುವರಿದ ಆಯುಧಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಸೆಜ್ಜಿಲ್ ಕ್ಷಿಪಣಿಯ ವಿನ್ಯಾಸಗೊಳಿಸಿದ್ದು ಯಾವಾಗ?
ಸೆಜ್ಜಿಲ್ ಕ್ಷಿಪಣಿಯ ವಿನ್ಯಾಸ ಕಾರ್ಯ 1990ರ ದಶಕದ ಆರಂಭದಲ್ಲೇ ಪ್ರಾರಂಭವಾಗಿತ್ತು. ಮೊದಲ ಪರೀಕ್ಷಾ ಉಡಾವಣೆ 2008ರಲ್ಲಿ ನಡೆದಿದ್ದು, ಆಗ ಕ್ಷಿಪಣಿ ಸುಮಾರು 800 ಕಿಮೀ ದೂರದ ಗುರಿ ತಲುಪಿತ್ತು. ನಂತರ 2009ರ ಮೇ ತಿಂಗಳಲ್ಲಿ 2ನೇ ಪರೀಕ್ಷೆ ನಡೆಸಿ ಗೈಡೆನ್ಸ್ ಮತ್ತು ನ್ಯಾವಿಗೇಶನ್ ವ್ಯವಸ್ಥೆಯನ್ನು ಸುಧಾರಿಸಲಾಯಿತು. 2009ರಿಂದ ಬಳಿಕ ಇನ್ನೂ ನಾಲ್ಕು ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದವು. 6ನೇ ಪರೀಕ್ಷೆಯಲ್ಲಿ ಕ್ಷಿಪಣಿ ಸುಮಾರು 1,900 ಕಿಲೋಮೀಟರ್ ದೂರ ಇಂಡಿಯನ್ ಓಷನ್ ಕಡೆಗೆ ಹಾರಿತ್ತು ಎಂದು ವರದಿಯಾಗಿದೆ.
ತಾರಕಕ್ಕೇರಿದ ಸಂಘರ್ಷ!
ಅಮೆರಿಕ (America) ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ತನ್ನ ಡಾನ್ಸಿಂಗ್ ಮಿಸೈಲ್ ಮೂಲಕ ಪ್ರತಿದಾಳಿ ನಡೆಸಿದೆ. ವರದಿಗಳ ಪ್ರಕಾರ, ಯುದ್ಧ ಆರಂಭವಾದಾಗಿನಿಂದ ಈವರೆಗೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ 15,000ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಮಾಡಿವೆ.
ಈ ಸಂಘರ್ಷದಲ್ಲಿ ಈವರೆಗೆ ಸುಮಾರು 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯುದ್ಧದ ತೀವ್ರತೆಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ವಿಮಾನಯಾನ ಮತ್ತು ತೈಲ ಸಾಗಾಟದ ಮೇಲೆ ಭಾರಿ ಪರಿಣಾಮ ಬೀರಿದೆ.
ಇರಾನ್‌ಗೆ ಸೋಲು ಸಮೀಪಿಸಿದೆ: ನೆತನ್ಯಾಹು
ಇದರ ನಡುವೆ ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ. ಇರಾನ್ (Iran) ತೀವ್ರ ಹಾನಿಗೊಳಗಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ತಿಳಿಸಿದ್ದಾರೆ. ಅವರ ಸಾವಿನ ವದಂತಿ ಬಳಿಕ ಮೊದಲ ಬಾರಿಗೆ ನೆತನ್ಯಾಹು ಸುದ್ದಿಗೋಷ್ಠಿ ನಡೆಸುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, 20 ದಿನಗಳ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯ ನಂತರ ಇರಾನ್ ಪರಮಾಣು ಶಸ್ತ್ರಾಸ್ತ್ರ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: Explainer | 2 ಲಕ್ಷ ಟನ್ ಬಾಸ್ಮತಿ ಅಕ್ಕಿ, 3,000 ಕಂಟೇನರ್ ಬಂದರಿನಲ್ಲೇ ಲಾಕ್ – ಭಾರತಕ್ಕೆ ಮತ್ತೊಂದು ಸಂಕಷ್ಟ!



