ವಾಷಿಂಗ್ಟನ್: ಅತ್ಯಾಧುನಿಕ ಎಫ್-15ಇ ಸ್ಟ್ರೈಕ್ ಈಗಲ್ (F-15E Strike Eagle) ಯುದ್ಧ ವಿಮಾನವನ್ನು ಹೊಡೆದು ಹಾಕಿ ಇರಾನ್(Iran) ಅಮೆರಿಕಗೆ ಈಗ ದೊಡ್ಡ ಶಾಕ್ ನೀಡಿದೆ.
2003 ರಲ್ಲಿ ಇರಾಕ್ ಯುದ್ಧದ (Iraq War) ನಂತರ ಅಮೆರಿಕದ (USA) ಯುದ್ಧ ವಿಮಾನಗಳು ಶತ್ರು ದೇಶಗಳು ಹೊಡೆದು ಹಾಕಿರಲಿಲ್ಲ. ಈಗ 23 ವರ್ಷದ ಬಳಿಕ ಶತ್ರು ನೆಲದಲ್ಲಿ ಪತನಗೊಳ್ಳುವ ಮೂಲಕ ಇರಾನ್ ಅಮೆರಿಕಕ್ಕೆ ಅರಗಿಸಿಕೊಳ್ಳಲಾಗದ ತಿರುಗೇಟು ನೀಡಿದೆ.
ಇರಾನ್‌ನ ಮಾಧ್ಯಮಗಳು ಇದು ಅತ್ಯಾಧುನಿಕ ಎಫ್-35 (F-35) ಸ್ಟೆಲ್ತ್ ವಿಮಾನವನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿತ್ತು. ಆದರೆ ಅಮೆರಿಕದ ಅಧಿಕಾರಿಗಳು ಮತ್ತು ಅವಶೇಷಗಳ ವಿಶ್ಲೇಷಣೆಯು ಅದು ಎಫ್-15ಇ ವಿಮಾನ ಎಂದು ದೃಢಪಡಿಸಿವೆ.
ಕ್ಷಿಪಣಿ ತಗುಲಿದ ತಕ್ಷಣ ವಿಮಾನದಲ್ಲಿದ್ದ ಪೈಲಟ್ ಮತ್ತು ಶಸ್ತ್ರಾಸ್ತ್ರ ಅಧಿಕಾರಿ ಮೇಲಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಅಮೆರಿಕದ ವಿಶೇಷ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇರಾನ್ ಹೊಡೆದಿದ್ದು ಹೇಗೆ?
ಯುದ್ಧ ವಿಮಾನವನ್ನು ಇರಾನ್ ದೇಶೀಯ ನಿರ್ಮಿತ ‘ಬಾವರ್-373’ (Bavar-373) ವಾಯು ರಕ್ಷಣಾ ವ್ಯವಸ್ಥೆಯಿಂದ ಸಯ್ಯದ್-4ಬಿ (Sayyad-4B) ಕ್ಷಿಪಣಿಯನ್ನು ಬಳಸಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿಯು ಸುಮಾರು 300-400 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
ರಕ್ಷಣಾ ವಿಶ್ಲೇಷಕರ ಪ್ರಕಾರ, ಇರಾನ್ ಸಾಂಪ್ರದಾಯಿಕ ರೇಡಾರ್ ಬದಲಿಗೆ ಎಲೆಕ್ಟ್ರೋ-ಆಪ್ಟಿಕಲ್/ಇನ್ಫ್ರಾರೆಡ್ (EO/IR) ಸೆನ್ಸರ್‌ಗಳನ್ನು ಬಳಸಿ ವಿಮಾನವನ್ನು ಪತ್ತೆಹಚ್ಚಿದೆ. ಇದು ‘ಪ್ಯಾಸಿವ್’ ತಂತ್ರಜ್ಞಾನವಾಗಿದ್ದು, ರೇಡಾರ್ ಸಿಗ್ನಲ್‌ಗಳನ್ನು ಹೊರಸೂಸುವುದಿಲ್ಲ. ಇದರಿಂದಾಗಿ ಎಫ್-15 ವಿಮಾನದ ರೇಡಾರ್ ಎಚ್ಚರಿಕೆ ವ್ಯವಸ್ಥೆಗೆ ದಾಳಿಯ ಮುನ್ಸೂಚನೆ ಸಿಗುವುದು ಅಸಾಧ್ಯವಾಯಿತು. ಇದನ್ನೂ ಓದಿ: ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್ ಕಾರ್ಯಾಚರಣೆ?
ಏನಿದು ಪ್ಯಾಸಿವ್ ಡಿಟೆಕ್ಷನ್?
ಸಾಮಾನ್ಯವಾಗಿ ರೇಡಾರ್‌ಗಳು ಸಿಗ್ನಲ್‌ಗಳನ್ನು ಹೊರಸೂಸುವ ಮೂಲಕ ವಿಮಾನವನ್ನು ಪತ್ತೆಹಚ್ಚುತ್ತವೆ. ಆದರೆ ಎಫ್-15 ವಿಮಾನಗಳಲ್ಲಿ ರೇಡಾರ್ ಎಚ್ಚರಿಕೆ ರಿಸೀವರ್‌ಗಳು (RWR) ಇರುವುದರಿಂದ ಶತ್ರು ರೇಡಾರ್ ತನ್ನನ್ನು ಗಮನಿಸುತ್ತಿದೆ ಎಂದು ಪೈಲಟ್‌ಗೆ ತಕ್ಷಣ ತಿಳಿಯುತ್ತದೆ. ಈ ಕಾರಣಕ್ಕೆ ಇರಾನ್ ಯಾವುದೇ ಸಿಗ್ನಲ್ ಹೊರಸೂಸದ ‘ಎಲೆಕ್ಟ್ರೋ-ಆಪ್ಟಿಕಲ್’ (EO) ಮತ್ತು ‘ಇನ್ಫ್ರಾರೆಡ್’ (IR) ಸೆನ್ಸರ್‌ಗಳನ್ನು ಬಳಸಿದೆ.
ಶತ್ರು ದೇಶಗಳ ರೇಡಾರ್‌ಗಳಿಂದ ತಪ್ಪಿಸಲು ಯುದ್ಧ ವಿಮಾನಗಳನ್ನು ಎಷ್ಟೇ ಅತ್ಯಾಧುನಿಕವಾಗಿ ನಿರ್ಮಾಣ ಮಾಡಿದರೂ ಒಂದು ರಹಸ್ಯವಿದೆ. ಅದು ಏನೆಂದರೆ ಹಾರುತ್ತಿರುವಾಗ ಎಂಜಿನ್‌ನಿಂದ ಅತಿಯಾದ ಶಾಖವನ್ನು ಬಿಡುಗಡೆ ಮಾಡುತ್ತದೆ. ಎಫ್-15 ವಿಮಾನದ ಇಂಜಿನ್‌ನಿಂದ ಹೊರಬರುವ ಅತಿಯಾದ ಶಾಖವನ್ನು (Heat Signature) ಇರಾನ್‌ನ ಸುಧಾರಿತ ಇನ್ಫ್ರಾರೆಡ್ ಸೆನ್ಸರ್‌ಗಳು ಗುರುತಿಸಿದವು. ಇದು ರಾತ್ರಿ ಸಮಯದಲ್ಲೂ ವಿಮಾನ ಎಲ್ಲಿ ಹಾರಾಟ ನಡೆಸುತ್ತಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚುತ್ತದೆ.
ಇರಾನ್ ತನ್ನ ಬಾವರ್-373 (Bavar-373) ವಾಯು ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಅತ್ಯಾಧುನಿಕ ರೇಡಾರ್‌ಗಳನ್ನು ಬಳಸಿದೆ. ಈ ವ್ಯವಸ್ಥೆಯು ಸ್ಟೆಲ್ತ್( ಶತ್ರುಗಳ ರೇಡಾರ್, ಇನ್ಫ್ರಾರೆಡ್ ಮತ್ತು ಇತರ ಪತ್ತೆಹಚ್ಚುವ ತಂತ್ರಜ್ಞಾನಗಳಿಗೆ ಸಿಗದಂತೆ ಹಾರಾಟ ನಡೆಸುವ ವಿಶೇಷ ವಿಮಾನ. ಇದನ್ನು ‘ಅದೃಶ್ಯ ವಿಮಾನ’ ಎಂದೂ ಕರೆಯಲಾಗುತ್ತದೆ) ಸಿಗದಂತೆ ಮರೆಯಾಗುವ ತಂತ್ರಜ್ಞಾನ ಹೊಂದಿರುವ ವಿಮಾನಗಳನ್ನೂ ಸುಮಾರು 400 ಕಿ.ಮೀ ದೂರದಲ್ಲೇ ಗುರುತಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.
ಇರಾನ್ ವಿಮಾನವನ್ನು ಪತ್ತೆಹಚ್ಚಲು ರೇಡಾರ್ ಕಿರಣಗಳಿಗಿಂತ ಹೆಚ್ಚಾಗಿ ವಿಮಾನದಿಂದ ಹೊರಬರುವ ಶಾಖ ಮತ್ತು ಬೆಳಕಿನ ಸಿಗ್ನಲ್‌ಗಳನ್ನು ಅವಲಂಬಿಸಿತ್ತು, ಇದರಿಂದಾಗಿ ವಿಮಾನದ ರಕ್ಷಣಾ ವ್ಯವಸ್ಥೆಗೆ ಈ ದಾಳಿಯ ಸುಳಿವು ಸಿಗಲಿಲ್ಲ.
ರಷ್ಯಾದ ಪತ್ರ ಇದೆಯೇ?
ಇರಾನ್ ಅಮೆರಿಕ ವಿಮಾನವನ್ನು ಹೊಡೆದುರುಳಿಸಿದ ಘಟನೆಯಲ್ಲಿ ರಷ್ಯಾದ ತಾಂತ್ರಿಕ ಮತ್ತು ಗುಪ್ತಚರ ನೆರವು ಮಹತ್ವದ ಪಾತ್ರ ವಹಿಸಿದೆ ಎಂದು ವರದಿಗಳು ಹೇಳಿವೆ.
ಇರಾನ್ ಬಳಸಿದ ಬಾವರ್-373 (Bavar-373) ವಾಯು ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ರಷ್ಯಾದ ಎಸ್-300 ಮತ್ತು ಎಸ್-400 ವ್ಯವಸ್ಥೆಗಳ ತಂತ್ರಜ್ಞಾನದ ಪ್ರಭಾವವಿದೆ. ರಷ್ಯಾದ ತಜ್ಞರು ಇರಾನ್‌ನ ರೇಡಾರ್‌ಗಳನ್ನು ಅಮೆರಿಕದ ಎಫ್-15 ನಂತಹ ವಿಮಾನಗಳನ್ನು ಪತ್ತೆಹಚ್ಚಲು ಮರು-ವಿನ್ಯಾಸಗೊಳಿಸಲು ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ.

ವಿಮಾನವನ್ನು ಹೊಡೆದುರುಳಿಸುವ ಮೊದಲು, ರಷ್ಯಾದ ತಯಾರಿಕೆಯ ಅತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳು ಎಫ್-15 ವಿಮಾನದ ಸಂವಹನ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಜ್ಯಾಮ್ (Jam) ಮಾಡಲು ಅಥವಾ ಅವುಗಳ ಸಿಗ್ನಲ್‌ಗಳನ್ನು ಪತ್ತೆಹಚ್ಚಲು ಇರಾನ್‌ಗೆ ಸಹಾಯ ಮಾಡಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇರಾನ್ ಮತ್ತು ರಷ್ಯಾ ಪಡೆಗಳು ಈ ಹಿಂದೆ ಜಂಟಿ ಮಿಲಿಟರಿ ತಾಲೀಮುಗಳನ್ನು ನಡೆಸಿದ್ದವು. ಈ ವೇಳೆ ಅಮೆರಿಕದ ಯುದ್ಧ ವಿಮಾನಗಳ ಹಾರಾಟದ ಶೈಲಿ ಮತ್ತು ಅವುಗಳ ದೌರ್ಬಲ್ಯಗಳನ್ನು ಗುರುತಿಸುವ ಬಗ್ಗೆ ರಷ್ಯಾ ಇರಾನ್‌ಗೆ ಮಾಹಿತಿ ನೀಡಿತ್ತು.
ರಷ್ಯಾದ ಕಣ್ಣಾವಲು ಉಪಗ್ರಹಗಳು ವಿಮಾನದ ನಿಖರವಾದ ಸ್ಥಾನದ ಬಗ್ಗೆ ಇರಾನ್‌ಗೆ ಮುನ್ನೆಚ್ಚರಿಕೆ ಅಥವಾ ‘ರಿಯಲ್-ಟೈಮ್’ ಮಾಹಿತಿಯನ್ನು ಒದಗಿಸಿರಬಹುದು ಎಂದು ವರದಿಯಾಗಿದೆ.
ಇರಾಕ್ ಯುದ್ಧದಲ್ಲಿ ಏನಾಗಿತ್ತು?
2003ರ ಇರಾಕ್ ಯುದ್ಧದ (Operation Iraqi Freedom) ಸಮಯದಲ್ಲಿ ಟಿಕ್ರಿಟ್ (Tikrit) ಸಮೀಪ ಅಮೆರಿಕದ F-15E ಸ್ಟ್ರೈಕ್ ಈಗಲ್ ವಿಮಾನ ಪತನಗೊಂಡಿತ್ತು. ಈ ವಿಮಾನವು ಕ್ಷಿಪಣಿಯಿಂದ ಪತನಗೊಂಡಿಲ್ಲ. ಬದಲಾಗಿ ನೆಲದ ಮೇಲಿದ್ದ ಇರಾಕಿ ಪಡೆಗಳು ನಡೆಸಿದ ಸಣ್ಣ ಶಸ್ತ್ರಾಸ್ತ್ರಗಳ ದಾಳಿ (Small Arms Fire) ಅಥವಾ ವಿಮಾನ ವಿರೋಧಿ ಫಿರಂಗಿ (Anti-Aircraft Artillery) ದಾಳಿಯಿಂದ ಪತನಗೊಂಡಿರಬಹುದು ಎಂದು ವರದಿಯಾಗಿತ್ತು.
ಎಫ್-15 ವಿಮಾನವು ಶತ್ರುಗಳ ನೆಲದ ಮೇಲಿನ ಗುರಿಗಳನ್ನು ನಾಶಪಡಿಸುವ ಕಡಿಮೆ ಎತ್ತರದ ಹಾರಾಟದ ಕಾರ್ಯಾಚರಣೆ ನಡೆಸುತ್ತಿತ್ತು. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.



