Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

Public TV
8 Min Read

ಭಾರತದ (India) ವಿರೋಧ ಧೋರಣೆ ತೋರಿ ಚೀನಾದತ್ತ (China) ವಾಲಿದ್ದ ಮಾಲ್ಡೀವ್ಸ್‌ (Maldives) ಈಗ ಮತ್ತೆ ಭಾರತದ ಮುಖಮಾಡಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಚೀನಾ, ಟರ್ಕಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದ ಅಧ್ಯಕ್ಷ ಮುಯಿಝು ಭಾರತೀಯರ ಬಾಯ್ಕಾಟ್‌ ಮಾಲ್ಡೀವ್ಸ್‌ (Boycott Maldives) ಅಭಿಯಾನಕ್ಕೆ ಬೆಚ್ಚಿದ್ದಾರೆ. ಚುನಾವಣೆಯ ಸಮಯದಲ್ಲಿ ಭಾರತದ ವಿರುದ್ಧ ಅಪಪ್ರಚಾರ ನಡೆಸಿದ್ದ ಮುಯಿಝು ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ಸಂಬಂಧವನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇಲ್ಲಿ ಇಂಡಿಯಾ ಔಟ್‌ (India Out) ಪ್ರಚಾರ ನಡೆಸಿ ಅಧಿಕಾರ ಏರಿದ್ದ ಮುಯಿಝು ಅವರ ನಿರ್ಧಾರ ಬದಲಾಗಿದ್ದು ಯಾಕೆ? ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಪ್ರವಾಸೋದ್ಯಮದ ಮೇಲೆ ಎಷ್ಟು ಪೆಟ್ಟು ಬಿತ್ತು? ಇಸ್ಲಾಂ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ ಆರ್ಥಿಕತೆ ಹೇಗಿದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಮಾಲ್ಡೀವ್ಸ್‌ ಎಲ್ಲಿದೆ?
ಹಿಂದೂ ಮಹಾಸಾಗರದಲ್ಲಿರುವ ಸಣ್ಣ ದ್ವೀಪ ಮಾಲ್ಡೀವ್ಸ್‌. ಹಿಂದೆ ಈ ಪ್ರದೇಶವನ್ನು ರಾಜರು ಆಳುತ್ತಿದ್ದರು. ಅಶೋಕನ ಅವಧಿಯಲ್ಲಿ ಮಾಲ್ಡೀವ್ಸ್‌ನಲ್ಲಿ ಬೌದ್ಧ ಧರ್ಮ ಪ್ರಸಾರವಾಯಿತು. 12 ಶತಮಾನದಲ್ಲಿ ಅಲ್ಲಿನ ರಾಜ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ನಂತರ ಈ ದೇಶ ನಿಧನವಾಗಿ ಇಸ್ಲಾಂ ರಾಷ್ಟ್ರವಾಗಿ ಬದಲಾಯಿತು.

2021ರ ಜನಗಣತಿಯ ಪ್ರಕಾರ ಮಾಲ್ಡೀವ್ಸ್‌ನಲ್ಲಿ ಹತ್ತಿರ ಹತ್ತಿರ ಐದೂವರೆ ಲಕ್ಷ ಜನರಿದ್ದಾರೆ. ಈ ಪೈಕಿ 98% ಮುಸ್ಲಿಮರೇ ಇದ್ದರೆ 0.3% ಕ್ರೈಸ್ತರಿದ್ದಾರೆ. ಭಾರತದ ಲಕ್ಷದ್ವೀಪದಿಂದ ಮಾಲ್ಡೀವ್ಸ್‌ಗೆ 798 ಕಿ.ಮೀ ದೂರ ಇದ್ದರೆ ಬೆಂಗಳೂರಿನಿಂದ 1,187 ಕಿ.ಮೀ ದೂರದಲ್ಲಿ ಮಾಲ್ಡೀವ್ಸ್‌ ಇದೆ.

 

ಆರ್ಥಿಕ ಸಂಕಷ್ಟದಲ್ಲಿ ಮಾಲ್ಡೀವ್ಸ್‌:
ಸುಮಾರು 1,200 ದ್ವೀಪಗಳ ರಾಷ್ಟ್ರವಾಗಿರುವ ಮಾಲ್ಡೀವ್ಸ್‌ ಮುಖ್ಯ ಆದಾಯ ಮೂಲ ಯಾವುದು ಎಂದರೆ ಪ್ರವಾಸೋದ್ಯಮ, ಆಸ್ತಿ ತೆರಿಗೆಗಳು. ಆದರೆ ಅಲ್ಲಿ ನಡೆಸುವ ಪಕ್ಷಗಳು ಅಧಿಕಾರಕ್ಕೆ ಏರಲು ಹಲವಾರು ಸಬ್ಸಿಡಿ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. ಇದರ ಜೊತೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಮೆಗಾ-ಮೂಲಸೌಕರ್ಯ, ವಸತಿ ಯೋಜನೆಗಳನ್ನು ಆರಂಭಿಸಿದೆ ಈ ಯೋಜನೆ ಪೂರ್ಣಗೊಳಿಸಲು ಭಾರತ, ಚೀನಾ ಮತ್ತು ವಿದೇಶದ ಬ್ಯಾಂಕ್‌ಗಳಿಂದ ಸಾಲ ಮಾಡಿದೆ.

2023ರಲ್ಲಿ ಮುಯಿಝು ಅಧಿಕಾರಕ್ಕೆ ಏರಿದ್ದರು. ಸದ್ಯ ಈಗ ಹಣದುಬ್ಬರ ಏರಿಕೆಯಾಗಿದ್ದರಿಂದ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರವಾಸೋದ್ಯಮ ಆದಾಯದಲ್ಲಿನ ಕಡಿತಗೊಂಡಿದೆ. ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲು 2 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿತು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಸರ್ಕಾರಕ್ಕೆ ಇದು ಮತ್ತಷ್ಟು ಹೊರೆಯಾಯಿತು. ಈ ನೇಮಕಾತಿಯಿಂದಲೇ ಬಜೆಟ್‌ನಿಂದ 65 ಮಿಲಿಯನ್‌ ಡಾಲರ್‌ ಖರ್ಚು ಮಾಡುತ್ತಿದೆ. ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಮುಯಿಝು ಅವರು ಇನ್ನು ಮುಂದೆ ಯಾವುದೇ ದೊಡ್ಡ ಮೂಲಸೌಕರ್ಯ ಯೋಜನೆ ಆರಂಭಿಸುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು.

ಜಾಗತಿಕ ಕ್ರೇಡಿಟ್‌ ರೇಟಿಂಗ್‌ ಸಂಸ್ಥೆ ಮೂಡೀಸ್‌ ಮಾಲ್ಡೀವ್ಸ್‌ ರೇಟಿಂಗ್‌ ಇಳಿಕೆ ಮಾಡಿದೆ. ವಿಶ್ವ ಬ್ಯಾಂಕ್‌ ಮಾಹಿತಿ ಅನ್ವಯ 2018 ರಲ್ಲಿ 3 ಶತಕೋಟಿ ಡಾಲರ್‌ ಇದ್ದರೆ 2024 ರಲ್ಲಿ ಇದು 8.2 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಜಿಡಿಪಿ 122.9% ಸಾಲವೇ ಇರುವ ಕಾರಣ ಈಗ ಸಂಕಷ್ಟಕ್ಕೆ ಸಿಲುಕಿದೆ.

ಬಾಯ್ಕಾಟ್‌ ಮಾಲ್ಡೀವ್ಸ್‌ ಆರಂಭವಾಗಿದ್ದು ಹೇಗೆ?
ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಯಾಕೆ ನಡೆಯಿತು? ಹಿನ್ನೆಲೆ ಏನು ಅಂತ ತಿಳ್ಕೊಳ್ಳಬೇಕಾದರೆ 5 ವರ್ಷದ ಹಿಂದೆ ಹೋಗಬೇಕು. 2010 ಮತ್ತು 2015ರಲ್ಲಿ ಭಾರತ ಧ್ರುವ್ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಮಾಲ್ಡೀವ್ಸ್‌ಗೆ ನೀಡಿತ್ತು. ದ್ವೀಪರಾಷ್ಟ್ರವಾದ ಕಾರಣ ಹುಡುಕಾಟ, ಹವಾಮಾನ ಕಣ್ಗಾವಲು ಮತ್ತು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ದ್ವೀಪರಾಷ್ಟ್ರದ ಜನರನ್ನು ಏರ್‌ಲಿಫ್ಟ್‌ ಮಾಡಲು ಭಾರತ ಹೆಲಿಕಾಪ್ಟರ್‌ ನೀಡಿತ್ತು.

ಮಾನವೀಯ ದೃಷ್ಟಿಯಿಂದ ಭಾರತ ಕೊಡುಗೆಯಾಗಿ ನೀಡಿದ್ದರೂ ಮಾಲ್ಡೀವ್ಸ್‌ನಲ್ಲಿ ಇದೊಂದು ವಿವಾದವಾಗಿ ಹೊರಹೊಮ್ಮಿತ್ತು. ಭಾರತ ತನ್ನ ಮಿಲಿಟರಿ ನೆಲೆಯಾಗಿ ಮಾಲ್ಡೀವ್ಸ್‌ನ್ನು ಬಳಸಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಲ್ಡೀವ್ಸ್‌ ಸರ್ಕಾರ ಈ ವಿಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಯಿತು. 2020ರಲ್ಲಿ ಇಂಡಿಯಾ ಔಟ್‌ ವಿಚಾರ ಜೋರಾಗಿ ಚರ್ಚೆ ಆಯ್ತು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರದ ಬಗ್ಗೆ ಅಪಪ್ರಚಾರ ಮಾಡಲಾಯಿತು. ಇಂಡಿಯಾ ಔಟ್‌ ಪ್ರಚಾರಕ್ಕೆ ಚೀನಾ ಹಿಂದುಗಡೆಯಿಂದ ಬೆಂಬಲ ನೀಡಿತು. ಅಂತಿಮವಾಗಿ ಭಾರತದ ವಿರೋಧಿಯಾಗಿ ಮೊಹಮ್ಮದ್‌ ಮುಯಿಝು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಯಾವೊಬ್ಬ ಭಾರತೀಯ ಸೈನಿಕ ಮಾಲ್ಡೀವ್ಸ್‌ನಲ್ಲಿ ಇರಬಾರದು, ಭಾರತದ ಸೈನಿಕರು ಮಾಲ್ಡೀವ್ಸ್‌ ತೊರೆಯಬೇಕು ಎಂದು ತಾಕೀತು ಮಾಡಿದರು.

ಕಿತ್ತಾಟ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎಂಬ ಚರ್ಚೆ ಆರಂಭವಾಯಿತು. ಪ್ರಧಾನಿ ಅವರ ಚಿತ್ರ ಹಾಗೂ ವಿಡಿಯೊಗಳು ಇದಕ್ಕೆ ಪುಷ್ಟಿ ನೀಡಿದ್ದವು. ಈ ಚಿತ್ರ ಹಾಗೂ ವಿಡಿಯೋಗಳಿಗೆ ಮಾಲ್ದೀವ್ಸ್‌ನ ಇಬ್ಬರು ಸಚಿವರು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಯಿತು. ಇದನ್ನೂ ಓದಿ: ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

ಪ್ರವಾಸಿಗರ ಸಂಖ್ಯೆ ಇಳಿಕೆ:
ಅಭಿಯಾನ ಜೋರಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಭಾರೀ ಇಳಿಕೆಯಾಗಿದ್ದು ಲಕ್ಷದ್ವೀಪಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. 2022 ರಲ್ಲಿ 2.4 ಲಕ್ಷ, 2023 ರಲ್ಲಿ 2.06 ಲಕ್ಷ ಮಂದಿ ಹೋಗಿದ್ದರೆ 2024 ರಲ್ಲಿ 1.3 ಲಕ್ಷ ಮಂದಿ ಮಾತ್ರ ಹೋಗಿದ್ದರು. ಪ್ರವಾಸಿಗರ ಸಂಖ್ಯೆ 50% ಇಳಿಕೆಯಾದ ಬೆನ್ನಲ್ಲೇ ಈಗ ಮಾಲ್ಡೀವ್ಸ್‌ ಭಾರತದತ್ತ ವಾಲಿದೆ.

2023 ರಲ್ಲಿ ಮಾಲ್ಡೀವ್ಸ್‌ಗೆ ಭಾರತದಿಂದ ಅತಿ ಹೆಚ್ಚು ಜನ ತೆರಳಿದ್ದರು. ಟಾಪ್‌ 5 ಪ್ರವಾಸಿಗರ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ರಷ್ಯಾ ಎರಡನೇ ಸ್ಥಾನ, ಚೀನಾ ಮೂರನೇ ಸ್ಥಾನದಲ್ಲಿತ್ತು. ಬಾಯ್ಕಾಟ್‌ ಅಭಿಯಾನ ಜಾಸ್ತಿ ಆಗುತ್ತಿದ್ದಂತೆ ಮಾಲ್ಡೀವ್ಸ್‌ ಭಾರತದಲ್ಲಿ ಪ್ರವಾಸಿಗರನ್ನು ಸೆಳೆಯಲು ರೋಡ್‌ ಶೋ ಸಹ ನಡೆಸಿತ್ತು. ಇದರ ಜೊತೆ ಸೋಶಿಯಲ್‌ ಮೀಡಿಯಾ ಇನ್ಫ್ಲಯೂನ್ಸರ್‌ಗೆ ಉಚಿತ ಪ್ರವಾಸ ಆಯೋಜಿಸಿ ಪ್ರಚಾರ ಸಹ ನಡೆಸಿತ್ತು. ಏನೇ ಪ್ರಚಾರ ನಡೆಸಿರೂ ಫಲ ಮಾತ್ರ ನೀಡಲಿಲ್ಲ. ಇದನ್ನೂ ಓದಿ: ಅಂದು ಇಂಡಿಯಾ ಔಟ್‌ – ಇಂದು ಸೇನಾ ಕಚೇರಿಯಲ್ಲೇ ದೊಡ್ಡ ಕಟೌಟ್‌ | ಇದು ಮೋದಿ ಮ್ಯಾಜಿಕ್‌

 

ಈಗ ಭಾರತ ಯಾಕೆ ಬೇಕು?
ಮಾಲ್ಡೀವ್ಸ್‌ ಈಗ ವಿಪರೀತ ಸಾಲದಲ್ಲಿದೆ. ಸಾಲ ಹೆಚ್ಚಾದ ಬೆನ್ನಲ್ಲೇ ಚೀನಾ ಹೆಚ್ಚಿನ ಸಾಲ ನೀಡಲು ಆಸಕ್ತಿ ತೋರಿಸಿಲ್ಲ. ಹೀಗಾಗಿ ಮಾಲ್ಡೀವ್ಸ್‌ ಗಲ್ಫ್‌ ದೇಶಗಳ ಮೊರೆ ಹೋಗಿತ್ತು. ಗಲ್ಫ್‌ ದೇಶಗಳಿಗೂ ಪ್ರವಾಸೋದ್ಯಮ ಕ್ಷೇತ್ರದ ಆದಾಯದ ಮೂಲಗಳಲ್ಲಿ ಒಂದು. ಗಲ್ಫ್‌ ದೇಶಗಳು ಮಾಲ್ಡೀವ್ಸ್‌ಗೆ ಸಾಲ ನೀಡಲು ಮುಂದೆ ಬರಲಿಲ್ಲ.

ಸಂಕಷ್ಟದ ಪರಿಸ್ಥಿತಿಯಲ್ಲಿ ಕೊನೆಗೆ ಮುಯಿಝು ಅನಿವಾರ್ಯವಾಗಿ ಭಾರತದ ಸಹಕಾರ ಕೇಳಿದರು. ಭಾರತ ಸಹಕಾರ ನೀಡುವುದಾಗಿ ಹೇಳಿತು. ಭಾರತ ಸಹಕಾರ ನೀಡಿದ ಬೆನ್ನಲ್ಲೇ ಉತ್ತರ ಮಾಲ್ಡೀವ್ಸ್‌ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಮಾಲ್ಡೀವ್ಸ್‌ನಲ್ಲಿ ಸೇತುವೆ ಮತ್ತು ರಸ್ತೆ ಯೋಜನೆ, ರಾಜಧಾನಿ ಮಾಲೆಯಲ್ಲಿ ದೊಡ್ಡ ವಸತಿ ಅಭಿವೃದ್ಧಿ ಯೋಜನೆ ಮತ್ತು ಮಾಲೆ ದ್ವೀಪವನ್ನು ಅದರ ಪಶ್ಚಿಮ ಉಪನಗರ ದ್ವೀಪಗಳೊಂದಿಗೆ ಸಂಪರ್ಕಿಸುವ ಹೊಸ ಸೇತುವೆ ಸೇರಿದಂತೆ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಗ್ರೇಟರ್ ಮಾಲೆ ಕನೆಕ್ಟಿವಿಟಿ ಪ್ರಾಜೆಕ್ಟ್‌ಗೆ ಭಾರತ 500 ಮಿಲಿಯನ್ ಡಾಲರ್‌ ನೆರವು ನೀಡಿದೆ.

2025 ರಲ್ಲಿ ಭಾರತವು ಮಾಲ್ಡೀವ್ಸ್‌ಗೆ ತನ್ನ ಸಹಾಯವನ್ನು 28 % ರಷ್ಟು ಹೆಚ್ಚಿಸಿತು, ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು 600 ಕೋಟಿ ರೂ. ಟಿಗಳನ್ನು ಮಂಜೂರು ಮಾಡಿತ್ತು.

 

 

 

ಭಾರತದ ಜೊತೆಯಿದ್ದರೆ ಲಾಭ ಜಾಸ್ತಿ!
ಮಾಲ್ಡೀವ್ಸ್‌ನಲ್ಲಿ ಚೀನಾ ಬಹಳ ಹೂಡಿಕೆ ಮಾಡಿದೆ. ಮಾಲ್ಡೀವ್ಸ್‌ನ ಐದಕ್ಕೂ ಹೆಚ್ಚು ದ್ವೀಪಗಳನ್ನು ಚೀನಾದ ಕಂಪನಿಗಳು 50 ವರ್ಷಗಳಿಗೆ ಗುತ್ತಿಗೆ ಪಡೆದಿವೆ. ಮಾಲೆ ಸಮುದ್ರ ಸೇತುವೆ ಅಭಿವೃದ್ಧಿ ಯೋಜನೆಯ ವೆಚ್ಚದ 50% ರಷ್ಟು ಹಣವನ್ನು ಚೀನಾವೇ ಭರಿಸಿದೆ. ಅಷ್ಟೇ ಅಲ್ಲದೇ 50% ರಷ್ಟು ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದೆ. ಚೀನಾ -ಮಾಲ್ಡೀವ್ಸ್‌ ಸ್ನೇಹ ಸೇತುವೆ, ವಿಮಾನ ನಿಲ್ದಾಣ ನವೀಕರಣ, ಮನೆಗಳ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸರ್ಕಾರ ಬಿಲಿಯನ್‌ಗಟ್ಟಲೇ ಡಾಲರ್‌ ಹಣವನ್ನು ಹೂಡಿಕೆ ಮಾಡಿದೆ. ಮಾಲ್ಡೀವ್ಸ್‌ ಮತ್ತು ಚೀನಾದ ಸಂಬಂಧ ಈಗ ಆರಂಭವಾಗಿದ್ದಲ್ಲ. 1975 ರಿಂದಲೇ ಚೀನಾ ಮಾಲ್ಡೀವ್ಸ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿದೆ.

ಚೀನಾ ಅಭಿವೃದ್ಧಿ ಹೊಂದಿದ ದೇಶ ಹೌದು. ಆದರೆ ಬಡ ದೇಶಗಳಿಗೆ ಭಾರೀ ಪ್ರಮಾಣದ ಸಾಲ ನೀಡಿ ನಂತರ ಆ ಸಾಲವನ್ನು ತೀರಿಸಲು ಆಗದೇ ಇದ್ದಾಗ ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ. ಈಗಾಲೇ ಶ್ರೀಲಂಕಾದ ಹಂಬನ್‌ತೋಟ ಬಂದರನ್ನು 99 ವರ್ಷಗಳ ಕಾಲ ಚೀನಾ ಮರ್ಚಂಟ್‌ ಪೋರ್ಟ್‌ ಹೋಲ್ಡಿಂಗ್‌ಗೆ ಲೀಸ್‌ಗೆ ನೀಡಲಾಗಿದೆ. ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಚೀನಾ ಯೋಜನೆಗಳು ಡೆಟ್‌ ಟ್ರ್ಯಾಪ್‌ ಡಿಪ್ಲೊಮಸಿ ಎಂದೇ ಎಂದೇ ಕುಖ್ಯಾತಿ ಪಡೆದಿದೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

ಈಗ ಮಾಲ್ಡೀವ್ಸ್‌ ಸಹ ಭಾರೀ ಪ್ರಮಾಣದಲ್ಲಿ ಸಾಲ ಮಾಡಿದೆ. ಚೀನಾದ ಸಹಾಯ ಮತ್ತಷ್ಟು ಪಡೆದರೆ ನಾವು ದಿವಾಳಿಯಾಗುವುದು ಖಚಿತ ಎನ್ನುವುದು ಗೊತ್ತಾಗುತ್ತಿದೆ. ಈ ಕಾರಣಕ್ಕೆ ಈಗ ಭಾರತದಿಂದ ಮತ್ತಷ್ಟು ಸಹಾಯ ಪಡೆಯಲು ಮುಂದಾಗಿದೆ. ಭಾರತ ಇಲ್ಲಿಯವರೆಗೂ ಬೇರೆ ದೇಶದಲ್ಲಿನ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದೆ ಹೊರತು ಕುತಂತ್ರ ಮಾಡಿಲ್ಲ. ಮಾಲ್ಡೀವ್ಸ್‌ಗೆ ಹಿಂದಿನಿಂದಲೂ ಸಹಾಯ ಮಾಡಿಕೊಂಡೇ ಬಂದಿದೆ.

1988 ರಲ್ಲಿ ನುಸುಳುಕೋರರು ದಾಳಿ ಮಾಡಿದ್ದ ಭಾರತ ಸಹಾಯ ಮಾಡಿತ್ತು. 2004ರಲ್ಲಿ ಸುನಾಮಿ ಸಮಯದಲ್ಲಿ ಭಾರತ ಅಲ್ಲಿನ ಪ್ರಜೆಗಳನ್ನು ರಕ್ಷಿಸಿತ್ತು. ಆರೋಗ್ಯ ಸಾಮಾಗ್ರಿಗಳನ್ನು ಕಳುಹಿಸಿತ್ತು. 2014ರಲ್ಲಿ ರಾಜಧಾನಿ ಮಾಲೆಯಲ್ಲಿ ನೀರಿನ ಬಿಕ್ಟಟ್ಟು ಎದುರಾದಾಗ ನಗರಕ್ಕೆ ಭಾರತ ವಿಮಾನದ ಮೂಲಕ ನೀರಿನ ಪ್ಯಾಕೆಟ್‌ ಕಳುಹಿಸಿಕೊಟ್ಟಿತ್ತು. ಕೊರೊನಾ ಸಮಯದಲ್ಲಿ ಭಾರತ ಮಾಲ್ಡೀವ್ಸ್‌ಗೆ ಉಚಿತ ಲಸಿಕೆಯನ್ನು ಕಳುಹಿಸಿತ್ತು.

ಭಾರತ ಮತ್ತು ಮಾಲ್ಡೀವ್ಸ್ 1981 ರಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಮಾಲ್ಡೀವ್ಸ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿರ್ಮಾಣ ಉದ್ಯಮಕ್ಕೆ ನಿರ್ಣಾಯಕ ವಸ್ತುಗಳಾದ ನದಿ ಮರಳು ಮತ್ತು ಜಲ್ಲಿಕಲ್ಲು ರಫ್ತು ಮಾಡುತ್ತಿದೆ. ಈಗ ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ರಫ್ತು 5% ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಿಂದ ಈ ವಸ್ತುಗಳ ರಫ್ತಿನ ಮೇಲೆ ವಿಶ್ವಾದ್ಯಂತ ನಿಷೇಧದ ಹೊರತಾಗಿಯೂ ಭಾರತವು ಮಾಲ್ಡೀವ್ಸ್‌ಗೆ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮಾಡುವುದನ್ನು ಮುಂದುವರಿಸಿತ್ತು.

ಮಾಲ್ಡೀವ್ಸ್‌ ಆದಾಯ ಯಾವುದು ಎಂದರೆ ಪ್ರವಾಸೋದ್ಯಮ. ದ್ವೀಪ ರಾಷ್ಟ್ರವಾಗಿರುವ ಕಾರಣ ಅಲ್ಲಿ ಕೃಷಿ, ಆಹಾರ ಉತ್ಪನ್ನಗಳನ್ನು ಬೆಳೆಯಲು ಸಾಧ್ಯವಿಲ್ಲ. ಆಹಾರ ಉತ್ಪನ್ನಗಳು ಬೇರೆ ದೇಶದಿಂದ ಆಮದಾಗಬೇಕು. ಚೀನಾದಿಂದ ಆಹಾರ ವಸ್ತುಗಳನ್ನಯ ಆಮದು ಮಾಡಿದರೆ ಮಾಲ್ಡೀವ್ಸ್‌ನಲ್ಲಿ ದರ ಭಾರೀ ಏರಿಕೆ ಆಗುತ್ತದೆ. ಇನ್ನು ಹತ್ತಿರದಲ್ಲಿರುವ ಶ್ರೀಲಂಕಾ ಇದೆ. ಆದರೆ ಅಲ್ಲಿಯೂ ಆಹಾರ ಸಮಸ್ಯೆ ಇದೆ. ಹೀಗಾಗಿ ಭಾರತದ ಸ್ನೇಹ ಅನಿವಾರ್ಯ. ತಪ್ಪು ಮಾಡಿದ ನಂತರ ಬುದ್ದಿ ಬರುತ್ತೆ ಎನ್ನುವಂತೆ ಈಗ ಭಾರತದತ್ತ ಮಾಲ್ಡೀವ್ಸ್‌ ವಾಲಿದೆ.

Share This Article