ಶುಕ್ರವಾರ ನಿರ್ಮಲಾ ನೀಡಿದ ಟಾನಿಕ್‍ಗೆ 793 ಅಂಕ ಜಿಗಿದ ಸೆನ್ಸೆಕ್ಸ್

Public TV
2 Min Read

ಮುಂಬೈ: ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೀಡಿದ ‘ಟಾನಿಕ್’ನಿಂದ ಮುಂಬೈ ಷೇರು ಮಾರುಕಟ್ಟೆಯ ಸೂಚ್ಯಂಕ ಇಂದು ಒಂದೇ ದಿನದಲ್ಲಿ 793 ಅಂಕಗಳನ್ನು ಜಿಗಿಯುವ ಮೂಲಕ ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ವಿದೇಶಿ ಹೂಡಿಕೆದಾರರ ಮೇಲೆ ಹೇರಿದ್ದ ಹೆಚ್ಚುವರಿ ಶುಲ್ಕವನ್ನು ಹಿಂದಕ್ಕೆ ಪಡೆಯುತ್ತಿರುವಾಗಿ ಘೋಷಿಸಿದ್ದರು. ಈ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬಗ್ಗೆ ನನಗೆ ಗೌರವವಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿರುವ ಅವರ ಕ್ರಮ ನಿಜಕ್ಕೂ ಶ್ಲಾಘನಿಯ. ಈ ಕಾರಣಕ್ಕೆ ಅವರು ದೊಡ್ಡ ನಾಯಕ. ಮಾತುಕತೆ ಮುಂದುವರಿಯುತ್ತದೆ ಎಂದು ಟ್ವೀಟ್ ಮಾಡಿ ಚೀನಾ ಜೊತೆಗಿನ ವ್ಯಾಪಾರ ಸಮರ ಮುಕ್ತಾಯಗೊಳಿಸುವ ಬಗ್ಗೆ ಸುಳಿವು ನೀಡಿದ್ದು ಸಹ ಸೆನ್ಸೆಕ್ಸ್ ಮೇಲಕ್ಕೆ ಹೋಗಲು ಸಹಕಾರಿ ಆಯಿತು.

ಮಧ್ಯಾಹ್ನ ಮೂರು ಗಂಟೆಯ ವೇಳೆಗೆ 37,428 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ ನಿಫ್ಟಿ 200 ಅಂಕ ಏರಿಕೆಯಾಗಿ 11,040 ಅಂಕಗಳಲ್ಲಿ ವಹಿವಾಟು ನಡೆಸುತಿತ್ತು. ಅಂತಿಮವಾಗಿ ಸೆನ್ಸೆಕ್ಸ್ 37,494 ಅಂಕಗಳಲ್ಲಿ ಕೊನೆಯಾದರೆ ನಿಫ್ಟಿ ದಿನದಲ್ಲಿ 228 ಅಂಕ ಏರಿ 11,057 ಅಂಕಗಳಲ್ಲಿ ಕೊನೆಗೊಂಡಿತು.

ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ಪ್ಯಾಕೆಜ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದ ಬಳಿಕ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕಿನ ಷೇರುಗಳು ಜಿಗಿದಿದೆ.

ಈ ಬಗ್ಗೆ ಐಡಿಬಿಐ ಕ್ಯಾಪಿಟಲ್ ಸಂಸೋಧನಾ ವಿಭಾಗದ ಮುಖ್ಯಸ್ಥ ಎಕೆ ಪ್ರಭಾಕರ್ ಪ್ರತಿಕ್ರಿಯಿಸಿ, ಸರಿಯಾದ ಸಮಯದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದ ಕಾರಣ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿದೆ. ಇದೇ ರೀತಿ ಮುಂದುವರಿದಿದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡು ಡಿಸೆಂಬರ್ ವೇಳೆಗೆ ದಾಖಲೆ ನಿರ್ಮಿಸಬಹುದು ಎಂದು ಅಂದಾಜಿಸಿದ್ದಾರೆ.

ಭಾರತದ ಹೊರತು ಪಡಿಸಿ ಹಾಂಕಾಂಗ್, ಕೊರಿಯಾ, ಶಾಂಘೈ, ಜಪಾನ್ ಮಾರುಕಟ್ಟೆ ಬೆಳಗ್ಗಿಗಿಂತ ಮತ್ತಷ್ಟು ಕುಸಿತಕಂಡಿದೆ. ವಿಶ್ವದ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ದರ ಒಂದು ಬ್ಯಾರೆಲ್‍ಗೆ 58.22 ಡಾಲರ್(ಅಂದಾಜು 4,100 ರೂ.) ಬೆಲೆಯಲ್ಲಿ ಮಾರಾಟವಾಗುತಿತ್ತು.

ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಭಾರೀ ಟೀಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದ್ದರು.

ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವಿಚಾರ ಎಲ್ಲರಿಗೆ ತಿಳಿದಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸಮಸ್ಯೆಯಾಗಿದೆ. ಇದರಿಂದಾಗಿ ಭಾರತಕ್ಕೂ ಸಮಸ್ಯೆಯಾಗಿದ್ದು, ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತ ಜಿಡಿಪಿಯಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಮುಂದಿದೆ. ಆರ್ಥಿಕತೆಯಲ್ಲಿ ಏರಿಳಿತ ನಡೆಯುತ್ತಲೇ ಇರುತ್ತದೆ. ಕುಸಿಯುತ್ತಿದೆ ಎನ್ನುವ ಕಾರಣಕ್ಕೆ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಉತ್ತಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *