ಕಲಬುರಗಿ| ದೆವ್ವ ಬಿಡಿಸುವ ಹೆಸರಲ್ಲಿ ಹಲ್ಲೆ; ಮಹಿಳೆ ಸಾವು

2 Min Read

ಕಲಬುರಗಿ: ದೆವ್ವ ಹಿಡಿದಿದೆ ಅಂತ ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಕಲಬುರಗಿಯ (Kalaburagi) ಆಳಂದದಲ್ಲಿ ನಡೆದಿದೆ.

ದೆವ್ವ ಹಿಡಿದಿದೆ ಎಂಬ ಅಂಧವಿಶ್ವಾಸಕ್ಕೆ ಒಳಗಾದ ಗಂಡನ ಮನೆಯವರು, ಬೇವಿನ ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ಆಳಂದ ಮೂಲದ ಮುಕ್ತಾಬಾಯಿ (26) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬಂಡೀಪುರ | ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಯಾದ ಮುಕ್ತಾಬಾಯಿ ಅವರನ್ನು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಐದು ವರ್ಷದ ಮಗನಿದ್ದಾನೆ. ಆದರೆ, ಕಳೆದ ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಡುತ್ತದೆ ಎಂದು ನಂಬಿದ್ದ ಆರೋಪಿಗಳು, ನಿರಂತರವಾಗಿ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದರು. ಈ ಬಗ್ಗೆ ಮೃತಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ನಾವು ಹೊಡೆದು ದೆವ್ವ ಬಿಡಿಸುತ್ತಿದ್ದೇವೆ ಎಂದು ಹೇಳಿದ್ದರು. ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ, ಆಕೆಯನ್ನು ಹೊಡೆಯಬೇಡಿ ಎಂದು ತಾಯಿ ತಿಪ್ಪವ್ವ ಎಷ್ಟೇ ಮನವಿ ಮಾಡಿದರೂ ಗಂಡನ ಮನೆಯವರು ಕೇಳಿರಲಿಲ್ಲ ಎಂದು ಆರೋಪಿಸಲಾಗಿದೆ.

ಮಗನ ಎದುರೇ ಭೀಕರ ಹಲ್ಲೆ:
ಶುಕ್ರವಾರ ಮುಕ್ತಾಬಾಯಿ ಮನೆಯಲ್ಲಿ ಕುಸಿದು ಬಿದ್ದಾಗ, ದೆವ್ವದ ಅಬ್ಬರ ಎಂದು ಭಾವಿಸಿದ ಸಂಬಂಧಿಕರು ಐದು ವರ್ಷದ ಮಗನ ಎದುರಲ್ಲೇ ಬೇವಿನ ಕಟ್ಟಿಗೆಗಳಿಂದ ಆಕೆಗೆ ಮನಬಂದಂತೆ ಹೊಡೆದಿದ್ದಾರೆ. ತಲೆ ಮತ್ತು ದೇಹದ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರೂ, ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತನ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುವಾಗ ಮುಕ್ತಾಬಾಯಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಆಘಾಟ್‌ 3.0 – ದೆಹಲಿ ಪೊಲೀಸರಿಂದ 600ಕ್ಕೂ ಹೆಚ್ಚು ಮಂದಿ ಬಂಧನ

ಕೊಲೆ ಆರೋಪ:
ನನ್ನ ಅಕ್ಕನಿಗೆ ಯಾವುದೇ ದೆವ್ವ ಹಿಡಿದಿರಲಿಲ್ಲ. ಗಂಡನ ಮನೆಯವರೇ ದೆವ್ವದ ನಾಟಕವಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತಳ ಸಹೋದರಿ ಶ್ರೀದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ‘ಝೀರೋ ಎಫ್‌ಐಆರ್’ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಮೃತಳ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

Share This Article