ಕಾರವಾರದಲ್ಲಿ ಗಮನ ಸೆಳೆದ ಡಾಗ್ ಶೋ – ದೇಶಿ, ವಿದೇಶಿ ತಳಿಯ 80 ಶ್ವಾನಗಳ ಪ್ರದರ್ಶನ

Public TV
1 Min Read

ಕಾರವಾರ: ನಾಯಿಗಳು ಅಂದರೆ ಬಹಳಷ್ಟು ಜನರಿಗೆ ಎಲ್ಲಿಲ್ಲದ ಪ್ರೀತಿ. ಎಲ್ಲರೂ ಶ್ವಾನ ಪ್ರಿಯರೇ. ಅಂತಹ ಶ್ವಾನ ಪ್ರಿಯರಿಗಾಗಿಯೇ ಕರಾವಳಿ ಜಿಲ್ಲೆಯ ಕಾರವಾರದಲ್ಲಿ ಡಿಫರೆಂಟ್ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾರವಾರ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಕರಾವಳಿ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಆಕರ್ಷಕ ಶ್ವಾನ ಪ್ರದರ್ಶನವನ್ನ ಆಯೋಜನೆ ಮಾಡಲಾಗಿತ್ತು. ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ಬಗೆಯ ಶ್ವಾನಗಳು ಜನರನ್ನ ಆಕರ್ಷಿಸಿದವು.

ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಈ ಪ್ರದರ್ಶನದಲ್ಲಿ ಲ್ಯಾಬ್ರಡಾಲ್, ಜರ್ಮನ್ ಶೆಫರ್ಡ್, ಡಾಬರ್ ಮನ್, ಮುಧೋಳ, ರಾಟ್ ವೀಲರ್, ಮಾಲ್ಟಿಸ್, ಡಾಲ್ಮೀಶನ್, ಗ್ರೇಟ್ ಡೇನ್, ಪಗ್, ಗೋಲ್ಡನ್ ರಿಟ್ರೀವಲ್ ಸೇರಿದಂತೆ ಬಗೆ ಬಗೆಯ ನಾಯಿಗಳು ಜನರನ್ನು ಆಕರ್ಷಿಸಿವೆ.

ಸುಮಾರು 24 ದೇಶಿ ವಿದೇಶಿ ತಳಿಯ 80 ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿ, ಶ್ವಾನ ಪ್ರಿಯರಿಗೆ ವೀಕೆಂಡ್‍ನಲ್ಲಿ ಸಖತ್ ಎಂಜಾಯ್ ಮೆಂಟ್ ನೀಡಿದವು. ಇದಲ್ಲದೇ ಶ್ವಾನ ಮಾರಾಟವನ್ನ ಸಹ ಶೋನಲ್ಲಿ ಮಾಡಲಾಯಿತು. ಜನರು ವಿವಿಧ ಬಗೆಯ ಶ್ವಾನಗಳನ್ನ ನೋಡಲು ಮುಗಿಬಿದ್ದು, ಆಯಾ ತಳಿಯ ಶ್ವಾನಗಳನ್ನ ಆಯೋಜಕರು ಕರೆದಾಗ ಶ್ವಾನಗಳು ಬಂದು ಪ್ರದರ್ಶನ ಕೊಡುತ್ತಿದ್ದವು.

ಇನ್ನು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ತಮ್ಮ ತಮ್ಮ ಪ್ರೀತಿಯ ನಾಯಿಗಳನ್ನು ಶೃಂಗಾರ ಮಾಡಿಕೊಂಡು ತಂದಿದ್ದರು. ಆಯೋಜಕರು ಕರೆಯುತ್ತಿದ್ದಂತೆ ಸಾಕು ಶ್ವಾನಗಳನ್ನ ವೇದಿಕೆಗೆ ತಂದು ಎಲ್ಲರಿಗೆ ತೋರಿಸಿ ಸಂತಸ ಪಟ್ಟರು. ಇನ್ನು ಕೆಲ ವಿದೇಶಿ ತಳಿಯ ಶ್ವಾನಗಳನ್ನ ಪ್ರದರ್ಶನದಲ್ಲಿ ಕೆಲವರು ಅವುಗಳ ಜೊತೆ ಫೋಟೋ ತೆಗೆಸಿಕೊಂಡು ಎಂಜಾಯ್ ಮಾಡಿದರು.

ಶ್ವಾನಗಳಿಗೆ ಪ್ರತ್ಯೇಕ ಮಳಿಗೆಗಳ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಿದ್ದು, ಶ್ವಾನ ಪ್ರಿಯರು ಪ್ರದರ್ಶನವಾದ ನಂತರ ತಾವು ಇಷ್ಟ ಪಟ್ಟ ಶ್ವಾನಗಳನ್ನ ಮಳಿಗೆಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *