ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ಅಂತರ್ಯುದ್ಧ ಕಡಿಮೆಯಾದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಎರಡು ಬಣಗಳಾಗಿ ವಿಂಗಡನೆಯಾಗಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ರಾಜಕೀಯ ತಂತ್ರಗಳ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. 2018 ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯರ ಮುಂದಾಳತ್ವದಲ್ಲಿ ಕಾಂಗ್ರೆಸ್ ಎದುರಿಸಿತ್ತು. ಆದರೆ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ಹೀಗಾಗಿ ನಮ್ಮ ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ ಎಂಬ ಚರ್ಚೆಗಳು ಕೈ ಅಂಗಳದಲ್ಲಿ ನಡೆಯುತ್ತಿವೆ. ಈ ಎ ಲ್ಲ ಚರ್ಚೆಗೆ ಪೂರಕ ಎಂಬಂತೆ ಗುರುವಾರದ ಸಭೆಯಲ್ಲಿ ಕೈ ನಾಯಕರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.
ಕಾಂಗ್ರೆಸ್ ಮುನ್ನೆಲೆಯಲ್ಲಿರುವ ಸಿದ್ದರಾಮಯ್ಯರನ್ನ ರಾಜಕೀಯವಾಗಿ ಕೆಡವಲೇ ಬೇಕೆಂದು ಕೆಲವರು ಹಿರಿಯ ನಾಯಕರ ಮುಂದಾಳತ್ವದಲ್ಲಿ ಪ್ರತ್ಯೇಕ ತಂಡ ರಚಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರೋಧಿ ಬಣ ಸೈಲೆಂಟ್ ಚಕ್ರವ್ಯೂಹ ರಚಿಸಿ ರಣಕಹಳೆ ಮೊಳಗಿಸಿದೆ. ಕೇವಲ ಸಿದ್ದರಾಮಯ್ಯ ಅಲ್ಲದೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ರಮೇಶ್ ಕುಮಾರ್ ವಿರುದ್ಧ ಸಹ ರಣತಂತ್ರ ಹೆಣೆಯಲಾಗಿದೆ. ಬಿಎಂಆರ್ ಡಿಎ ಕಟ್ಟಡದಲ್ಲಿರುವ ಒಂದು ಕೋಣೆಯಲ್ಲಿ ಸಿದ್ದರಾಮಯ್ಯ ಮತ್ತು ಬಣದ ವಿರುದ್ಧ ಷಡ್ಯಂತ್ರ ರಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ
ಬಿಗ್ ಬಾಸ್ ಯಾರು?
1. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ: ಶತಾಯಗತಾಯ ಸಿದ್ದರಾಮಯ್ಯರನ್ನ ರಾಜಕೀಯವಾಗಿ ಹಣಿಯಲೇಬೇಕು ಅನ್ನೋ ಹಠಕ್ಕೆ ಬಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಟೀಂ ನ ಬಾಸ್. ಬಿಗ್ ಬಾಸ್ ಖರ್ಗೆ ಸೂಚನೆ ಮೇರೆಗೆ ವಾರ್ ರೂಂ ನಲ್ಲಿ ಪ್ಲಾನ್ ಸಿದ್ಧಪಡಿಸಿ ಇಂಪ್ಲಿಮೆಂಟ್ ಮಾಡಲಾಗುತ್ತಿದೆ.
2. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್: ಸಿದ್ದು ವಿರೋಧಿ ಬಣದ ಥಿಂಕ್ ಟ್ಯಾಂಕ್ ಆಗಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಕೆಲಸ ಮಾಡುತ್ತಿದ್ದು ಸಿದ್ದರಾಮಯ್ಯ ವಿರುದ್ಧ ಪ್ರಬಲವಾದ ಅಸ್ತ್ರ ಪ್ರಯೋಗದ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
3. ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್: ವಾರ್ ರೂಂನ ಚರ್ಚೆ ಬಿಗ್ ಬಾಸ್ ಡೈರೆಕ್ಷನ್, ಥಿಂಕ್ ಟ್ಯಾಂಕ್‍ನ ಐಡಿಯಾ ಇಷ್ಟನ್ನು ಇಂಪ್ಲಿಮೆಂಟ್ ಮಾಡುವ, ಬ್ಲೂ ಪ್ರಿಂಟ್ ಸಿದ್ಧಪಡಿಸೋ ಜವಾಬ್ದಾರಿ ಮಾಸ್ಟರ್ ಮೈಂಡ್ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್. ಇವರು ಜಿ. ಪರಮೇಶ್ವರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಮಾಹಿತಿದಾರರು:
1. ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ
2. ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ
ರಾಜ್ಯಸಭಾ ಸದಸ್ಯರೂ ಆಗಿರುವ ಫ್ರೊ.ರಾಜೀವ್ ಗೌಡ ಹಾಗೂ ಕೆ.ಸಿ.ರಾಮಮೂರ್ತಿ ಅವರು ಇಡಿ ಕಾರ್ಯಾಚರಣೆಗೆ ಬೇಕಾದ ಮಾಹಿತಿ ಸಂಗ್ರಹಿಸಿ ಅದನ್ನ ತಲುಪಿಸಬೇಕಾದ ಕಡೆಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಅಟ್ಯಾಕರ್ಸ್:
1. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ
2. ಮಾಜಿ ಸಿಎಂ ವೀರಪ್ಪ ಮೊಯ್ಲಿ
3. ಮಾಜಿ ಸಚಿವ ರಾಮಲಿಂಗರೆಡ್ಡಿ
4. ಮಾಜಿ ಸಚಿವ ಹೆಚ್‍ಕೆ ಪಾಟೀಲ್
5. ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ
ಕಾಂಗ್ರೆಸ್ಸಿನಲ್ಲಿ ಹುಟ್ಟಿಕೊಂಡಿರುವ ಬಣಗಳಲ್ಲಿ ಆಂತರಿಕ ಭಿನ್ನಮತಗಳು ಹಲವು ಬಾರಿ ಬಹಿರಂಗವಾಗಿಯೂ ಸ್ಫೋಟಗೊಂಡಿವೆ. ಲೋಕಸಭಾ ಚುನಾವಣೆ ಬಳಿಕ ಸೋತ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯರ ವಿರುದ್ಧ ಕೋಪಗೊಂಡಿದ್ದು ನಿಜ. ಇತ್ತ ಸೋಲುಂಡ ಕೆಲ ನಾಯಕರು ತಮ್ಮ ಸೋಲಿಗೆ ಕಾಂಗ್ರೆಸ್ ಶಾಸಕರು ಮತ್ತು ಮೈತ್ರಿ ಕಾರಣ ಎಂದಿದ್ದರು. ತಮ್ಮ ವಿರೋಧಿ ಬಣಗಳ ಬಾಣಕ್ಕೆ ಸಿದ್ದರಾಮಯ್ಯ ಯಾವ ಅಸ್ತ್ರ ಪ್ರಯೋಗಿಸ್ತಾರೆ ಮತ್ತು ಇಬ್ಬರಲ್ಲಿ ಗೆಲ್ಲೋದ್ಯಾರು ಎಂಬುದನ್ನು ಕಾದು ನೋಡಬೇಕಿದೆ.