EXCLUSIVE: ದ್ರಾವಣ, ನೀರು ಹಾಕಿದ್ರೆ ಕೆಳಗೆ ಸೋರುತ್ತೆ- ಹೆಲ್ತ್ ವಾರಿಯರ್ಸ್‌ಗೆ ಆಸ್ಪತ್ರೆಯಿಂದ ಕಳಪೆ ಪಿಪಿಇ ಕಿಟ್

Public TV
2 Min Read

– ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಆಸ್ಪತ್ರೆ ಡೀನ್

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ವೈದ್ಯರು, ನರ್ಸ್, ಪೊಲೀಸರು ಹಗಲಿರುಳು ಜನರ ಜೀವವನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಆದರೆ ಕೊರೊನಾ ಕೆಲಸ ಮಾಡುವ ಹೆಲ್ತ್ ವಾರಿಯರ್ಸ್‌ಗೆ ಸರ್ಕಾರ ಕಳಪೆ ಪಿಪಿಇ ಕಿಟ್ ಕೊಟ್ಟಿದೆ ಎಂಬ ಆರೋಪವೊಂದು ಕೇಳಿಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್ ಧರಿಸುವ ಪಿಪಿಇ ಕಿಟ್‍ನ ಗುಣಮಟ್ಟದ ಎಕ್ಸ್ ಕ್ಲ್ಯೂಸಿವ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಿಪಿಇ ಕಿಟ್‍ನ ಮೇಲೆ ದ್ರಾವಣ ಅಥವಾ ನೀರು ಹಾಕಿದರೆ ಅದು ಹಾಗೆ ಕೆಳಗೆ ಸೋರುತ್ತೆ. ಇದರಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಕೊಡುವಾಗ ಆತ ಕೆಮ್ಮಿದರೆ ಅಥವಾ ಸೀನಿದರೆ ಆತನ ದ್ರಾವಣ ವೈದ್ಯಕೀಯ ಸಿಬ್ಬಂದಿಯ ಮೈ ಮೇಲೆ ನೇರವಾಗಿ ಬರುತ್ತೆ. ಈ ಮೂಲಕ ಸರ್ಕಾರ ನೀಡಿರುವ ಪಿಪಿಇ ಕಿಟ್ ಸುರಕ್ಷತೆ ಇಲ್ಲದ ಪಿಪಿಇ ಕಿಟ್ ಆಗಿದೆ ಎಂದು ವಾರಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಪಿಇ ಕಿಟ್ ವೈರಸ್ ನಿರೋಧಕವಾಗಿರಬೇಕು. ಆದರೆ ಸರ್ಕಾರ ನೀಡಿರುವ ಕಳಪೆ ಮಟ್ಟದ ಪಿಪಿಇ ಕಿಟ್ ಮೇಲೆ ನೀರು ಹಾಕಿದರೆ ಅದು ಹಾಗೆ ಕೆಳಗೆ ಸೋರುತ್ತಿದೆ. ಇದನ್ನು ಖಂಡಿಸಿ ಸಿಬ್ಬಂದಿ ಹಾಸ್ಟೆಲ್ ಹೊರ ಭಾಗದಲ್ಲಿ ಮೌನ್ ಪ್ರತಿಭಟನೆ ಮಾಡಿದ್ದಾರೆ.

ಈಗಾಗಲೇ ವಿಕ್ಟೋರಿಯಾದಲ್ಲಿ ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿಗೆ ಕೊರೊನಾ ಬಂದಿದೆ. ಈ ರೀತಿ ಹೆಲ್ತ್ ವಾರಿಯರ್ಸ್‌ಗೆ ಕಳಪೆ ಮಟ್ಟದ ಕಿಟ್ ಕೊಟ್ಟರೆ ಕೋವಿಡ್ ರೋಗಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂದು ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿ, ಈ ಪಿಪಿಇ ಕಿಟ್ ತುಂಬಾ ಕಳಪೆ ಮಟ್ಟದ್ದಾಗಿದೆ. ದಯವಿಟ್ಟು ಇದನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಪಿಪಿಇ ಕಿಟ್ ಕೊಡಿ. ಇಲ್ಲವಾದರೆ ನಮಗೂ ಕೊರೊನಾ ಸೋಂಕು ಬರುವುದು ಪಕ್ಕಾ ಆಗುತ್ತದೆ. ಇದರಿಂದ ನಮ್ಮ ಜೀವನ ತುಂಬಾ ಕಷ್ಟವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಯ ಬಳಿಕ ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ.ಜಯಂತಿ ಈ ಬಗ್ಗೆ ಸ್ಪಂದಿಸಿದ್ದಾರೆ. ನಾನು ಪಿಪಿಇ ಕಿಟ್ ಕೊಡುವ ಮೊದಲೇ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇವೆ. ವೈದ್ಯರು ಕೂಡ ಅದನ್ನೇ ಧರಿಸಿದ್ದೇವೆ. ಪಿಪಿಇ ಕಿಟ್ ಗುಣಮಟ್ಟವನ್ನು ಪರಿಶೀಲನೆ ಮಾಡಿ ನೀಡಿದ್ದೇವೆ. ಈಗ ಮತ್ತೆ ಪಿಪಿಇ ಕಿಟ್ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತೇವೆ. ನಂತರ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಅನ್ನು ವಾಪಸ್ ಕೊಡುತ್ತೇವೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ಜಯಂತಿ ತಿಳಿಸಿದರು.

 

ಮೂರು ದಿನಗಳ ಹಿಂದೆ ಪಿಪಿಇ ಕಿಟ್ ಬೇರೆ ಇತ್ತು. ಇಂದು ಬೇರೆ ಪಿಪಿಇ ಕಿಟ್ ನೀಡಿದ್ದೇವೆ. ಅದರಲ್ಲಿ ಒಂದರಲ್ಲಿ ಡ್ಯಾಮೇಜ್ ಆಗಿತ್ತು. ನರ್ಸ್ ಗಳಿಗೆ ಪಿಪಿಇ ಕಿಟ್ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಸಿಬ್ಬಂದಿ ಆತಂಕಗೊಂಡಿದ್ದಾರೆ.  ಕಿಟ್ ಮೇಲೆ ದ್ರಾವಣ ಬಿದ್ದರೆ ಅದು ಒಣಗುತ್ತದೆ ಎಂದು ನರ್ಸಿಂಗ್ ಆಫೀಸರ್ ಸಂತೋಷ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *