ಗುಡ್ ನ್ಯೂಸ್, 2 ರೂ. ಇಳಿಕೆಯಾಗುತ್ತೆ ಪೆಟ್ರೋಲ್, ಡೀಸೆಲ್ ದರ

Public TV
3 Min Read

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತ ಗೊಳಿಸಿದೆ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆಯಾಗಲಿದೆ.

ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಈ ವರ್ಷ 26 ಸಾವಿರ ಕೋಟಿ ರೂ. ಹೊರೆ ಸರ್ಕಾರಕ್ಕೆ ಬೀಳಲಿದೆ. ಈ ಹಣಕಾಸು ವರ್ಷದಲ್ಲಿ 13 ಸಾವಿರ ಕೋಟಿ ರೂ. ಹೊರೆ ಬೀಳಲಿದೆ ಎಂದು ಹೇಳಿದೆ.

ಪೆಟ್ರೋಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಸೆಪ್ಟೆಂಬರ್ 13 ರಂದು 70.38 ರೂ. ಇತ್ತು. ಇದರಲ್ಲಿ 30.70 ರೂ. ಡೀಲರ್ ಶುಲ್ಕ, 21.48 ರೂ. ಅಬಕಾರಿ ಸುಂಕ 3.24 ರೂ. ಡೀಲರ್ ಕಮಿಷನ್, 14.96 ರೂ. ವ್ಯಾಟ್ ತೆರಿಗೆ ಇದೆ.

ಡೀಸೆಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ ಸೆಪ್ಟೆಂಬರ್ 13 ರಂದು 58.72 ರೂ.ಇತ್ತು. ಇದರಲ್ಲಿ 30.54 ರೂ. ಡೀಲರ್ ಶುಲ್ಕ, 17.33 ರೂ. ಅಬಕಾರಿ ಸುಂಕ 2.18 ರೂ. ಡೀಲರ್ ಕಮಿಷನ್, 8.67 ರೂ. ವ್ಯಾಟ್ ತೆರಿಗೆ ಇದೆ.

ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಎಷ್ಟಿದೆ?
ಪೆಟ್ರೋಲ್: ಭಾರತ(ದೆಹಲಿ) 70.38 ರೂ., ಪಾಕಿಸ್ತಾನ 40.82 ರೂ., ಬಾಂಗ್ಲಾದೇಶ 69.16 ರೂ., ಶ್ರೀಲಂಕಾ 49.80 ರೂ., ನೇಪಾಳ 61.88 ರೂ. ಇದೆ.

ಡೀಸೆಲ್: ಭಾರತ(ದೆಹಲಿ)58.72 ರೂ., ಪಾಕಿಸ್ತಾನ 47.15 ರೂ., ಬಾಂಗ್ಲಾದೇಶ 52.27 ರೂ., ಶ್ರೀಲಂಕಾ 40.43 ರೂ., ನೇಪಾಳ 46.72 ರೂ. ಇದೆ.

14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್: ಭಾರತ 487 ರೂ., ಪಾಕಿಸ್ತಾನ 1081.32 ರೂ., ಬಾಂಗ್ಲಾದೇಶ 639.50 ರೂ., ಶ್ರೀಲಂಕಾ 638.68 ರೂ., ನೇಪಾಳ 836.62 ರೂ. ಇದೆ.

ಪೆಟ್ರೋಲ್ ಜಿಎಸ್‍ಟಿ ಅಡಿ ಬರುತ್ತಾ?
ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

ಒಂದು ವೇಳೆ ಪೆಟ್ರೋಲ್ ಜಿಎಸ್‍ಟಿ ಅಡಿ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆಯಾಗುತ್ತದೆ. ಆದರೆ ಆದಾಯಕ್ಕೆ ಭಾರೀ ಹೊಡೆತ ಬೀಳುವ ಕಾರಣ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

ಬೆಲೆ ಕಡಿಮೆಯಾಗಬಾರದು:
ಪೆಟ್ರೋಲ್ ಬೆಲೆ ಕಡಿಮೆಯಾಗಬಾರದು ಎನ್ನುವ ವಾದವನ್ನು ಕೆಲವರು ಮಂಡಿಸುತ್ತಿದ್ದಾರೆ. ಒಂದು ವೇಳೆ ಭಾರೀ ಇಳಿಕೆಯಾದರೆ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿಯಬಹುದು. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದಲ್ಲದೇ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಹೀಗಾಗಿ ಬೆಲೆ ಇಳಿಕೆಯಾಗಬಾರದು ಎನ್ನುವ ವಾದವನ್ನು ಕೆಲ ಆರ್ಥಿಕ ತಜ್ಞರು ಮಂಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲು ಸಾರ್ವಜನಿಕ ಸಾರಿಗೆಯ ಟಿಕೆಟ್ ಬೆಲೆಯನ್ನು ಇಳಿಸುವುದು ಉತ್ತಮ. ಇದರಿಂದಾಗಿ ಜನರು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ತೈಲ ಬೆಲೆ ಏರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಈಗ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *