ಮತದಾರರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ಲಕ್ಷ ಲಕ್ಷ ಮದ್ಯ ವಶ – ಬಿಜೆಪಿ ಶಾಸಕಿಯ ಬಂಟನ ಮೇಲೆ ಕೇಸು ದಾಖಲು

Public TV
2 Min Read

ಕಾರವಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಏಳು ಲಕ್ಷದ ಹದಿನೈದು ಸಾವಿರ ಮೌಲ್ಯದ 2,440 ಲೀಟರ್ ಗೋವಾ ಅಕ್ರಮ ಸರಾಯಿಯನ್ನು ಖಚಿತ ಮಾಹಿತಿ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಹಳ್ಳಿ ಗ್ರಾಮದ ಮನೆಯ ಕಾಂಪೌಂಡ್ ನಲ್ಲಿ ವಶಕ್ಕೆ ಪಡೆಯಲಾಗಿದೆ.

ಘಟನೆ ಏನು?
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಿಗೆ ಮದ್ಯ ಹಂಚಲು ರಾಜಕಾರಣಿಗಳು ಈಗಾಗಲೇ ತಯಾರಿ ನಡೆಸಿಕೊಂಡಿದ್ದಾರೆ. ಹೀಗಾಗಿ ಅತೀ ಕಡಿಮೆ ಬೆಲೆಗೆ ಸಿಗುವ ಗೋವಾ ಮದ್ಯವನ್ನು ಗೋವಾದಲ್ಲಿ ಖರೀದಿಸಿ ಕಾಡಿನ ಹಾಗೂ ಜಲ ಮಾರ್ಗದ ಮೂಲಕ ಕರ್ನಾಟಕ ಗಡಿಯ ಅರಣ್ಯದಲ್ಲಿ ಸಂಗ್ರಹಿಸಿಡಲಾಗುತ್ತದೆ. ರಾತ್ರಿ ವೇಳೆ ಈ ಮಾಲುಗಳನ್ನು ಸರಕು ಸಾಗಾಣಿಕಾ ವಾಹನ ಅಥವಾ ಕಾರುಗಳಲ್ಲಿ ತುಂಬಿ ನಿಗದಿ ಸ್ಥಳದಲ್ಲಿ ಡಂಪ್ ಮಾಡಲಾಗುತ್ತದೆ. ನಂತರ ಚುನಾವಣೆ ಸಂದರ್ಭದಲ್ಲಿ ಇವುಗಳನ್ನು ಮತದಾರರಿಗೆ ಹಂಚುವ ಜೊತೆಗೆ ಮಾರಾಟ ಮಾಡಲಾಗುತ್ತದೆ.

ಈ ಬಾರಿ ಕೂಡ ಲೋಕಸಭಾ ಚುನಾವಣೆಗೆ ಮಾರಾಟ ಹಾಗೂ ಮತದಾರರಿಗೆ ನೀಡಲು ಗೋವಾದಿಂದ ಮದ್ಯ ತರಿಸಿ ಕರ್ನಾಟಕದ ಅರಣ್ಯದಲ್ಲಿ ಸಂಗ್ರಹಿಸಿಟ್ಟಿದ್ದರು. ಗುರುವಾರ ಮಧ್ಯರಾತ್ರಿ ವೇಳೆ ಕಾರವಾರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕರ ಆಪ್ತನಾಗಿದ್ದ ಶಿರವಾಡದ ದಿಲೀಪ್ ಮಹಾನಂದ ನಾಯ್ಕ, ಸುನಿಲ್ ಪಂಡಿತ್ ಹಾಗೂ ವಿಷ್ಣು ತಾಳೇಕರ್ ಎಂಬವರು ಬೆಳಗಾವಿಯ ನಕಲಿ ನೊಂದಣಿ ಹೊಂದಿದ್ದ ವಿಂಗರ್ ನಲ್ಲಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಸಿಬ್ಬಂದಿ ತಡೆದು ಪರಿಶೀಲಿಸಿದ್ದಾರೆ.

ಈ ವೇಳೆ ಅವರನ್ನು ಯಾಮಾರಿಸಿ ವಾಹನವನ್ನು ಚಲಾಯಿಸಿದ ಆರೋಪಿಗಳು ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿನ ಸೀತಾರಾಮ್ ಪ್ರಭಾಕರ್ ಚಿಂಚನಕರ್ ಎಂಬವರ ಮನೆಯೊಂದರ ಕಾಂಪೌಂಡ್ ನಲ್ಲಿ ಇಳಿಸಿ ಗಾಡಿಯೊಂದಿಗೆ ಪರಾರಿಯಾಗಿದ್ದಾರೆ. ಇನ್ನು ವಾಹನವನ್ನು ಹಿಂಬಾಲಿಸಿ ಬಂದ ಅಬಕಾರಿ ಜಿಲ್ಲಾ ಆಯುಕ್ತ ಮಂಜುನಾಥ ಹಾಗೂ ಕಾರವಾರದ ಸಿಬಿಐ, ಡಿ.ವೈ.ಎಸ್.ಪಿ ರವರು ಶೋಧಿಸಿದಾಗ ಲಕ್ಷ ಲಕ್ಷ ಮೌಲ್ಯದ ಸರಾಯಿ ಪತ್ತೆಯಾಗಿದೆ.

ವಾಹನದಲ್ಲಿತ್ತು ಮಾರಕಾಸ್ತ್ರಗಳು!
ಇನ್ನು ಗೋವಾ ಮದ್ಯ ಸಾಗಾಟದ ವೇಳೆ ವಾಹನವನ್ನು ಅಬಕಾರಿ ಸಿಬ್ಬಂದಿ ಪರಿಶೀಲನೆಗೆ ಮುಂದಾದಾಗ ಮಾರಕಾಸ್ತ್ರಗಳ ಪತ್ತೆಯಾಗಿತ್ತು. ಈ ವೇಳೆ ತಕ್ಷಣದಲ್ಲಿ ವಾಹನ ಚಲಾಯಿಸಿದ್ದರಿಂದ ವಾಹನವನ್ನು ಚೇಸ್ ಮಾಡಿದರು. ಅಷ್ಟರಲ್ಲಾಗಲೇ ಮದ್ಯವನ್ನು ಡಂಪ್ ಮಾಡಿ ಆರೋಪಿಗಳು ವಾಹನ ಸಮೇತ ಪರಾರಿಯಾಗಿದ್ದರು. ಆದರೂ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

7 ಲಕ್ಷದ 15 ಸಾವಿರ ಮೌಲ್ಯದ 2,440 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡ ಬೆನ್ನಲ್ಲೇ ಮದ್ಯ ದೊರೆತ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿನ ಸೀತಾರಾಮ್ ಪ್ರಭಾಕರ್ ಚಿಂಚನಕರ್, ಶಿರವಾಡದ ದಿಲೀಪ್ ಮಹಾನಂದ ನಾಯ್ಕ, ಸುನಿಲ್ ಪಂಡಿತ್ ಮತ್ತು ವಿಷ್ಣು ತಾಳೇಕರ್ ಮೇಲೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *