ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ- ಮದ್ಯ ವರ್ತಕರ ಸಂಘದಿಂದ ಆರೋಪ

Public TV
2 Min Read

ಉಡುಪಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಉದ್ಯಮವನ್ನು ನಡೆಸುವುದೇ ಕಷ್ಟವಾಗಿದೆ. ಮುಂಬರುವ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಮದ್ಯ ವರ್ತಕರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮದ್ಯ ವರ್ತಕ ಸಂಘ ಎಚ್ಚರಿಸಿದೆ.

ನಗರದಲ್ಲಿ ರಾಜ್ಯ ಮದ್ಯ ವರ್ತಕ ಸಂಘ ಸದಸ್ಯರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಒಂದು ವೇಳೆ ಸರಕಾರ ಇದಕ್ಕೂ ಬಗ್ಗದಿದ್ದರೆ ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಮಿಲಿಟರಿ ಕ್ಯಾಂಟೀನ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಡಾಬಾ ಮತ್ತು ಗೂಡಂಗಡಿಗಳಲ್ಲಿ ಮದ್ಯ ಮಾರಾಟ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ವೈನ್ ಮರ್ಚಂಟ್ ಸದಸ್ಯರು ಸಲಹೆ ನೀಡಿದ್ದಾರೆ.

ಉಡುಪಿಯಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ತಮ್ಮ ಬೇಡಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ ಅವರಿಗೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ವರಮಾನ ನೀಡಿದರೂ ಸರ್ಕಾರ ಕನಿಷ್ಠ ಒಂದು ಗಂಟೆ ನಮ್ಮ ಸಮಸ್ಯೆಯನ್ನು ಆಲಿಸುವ ವ್ಯವಧಾನವನ್ನು ಹೊಂದಿಲ್ಲ ಎಂದು ವ್ಯಕ್ತಪಡಿಸಿದ್ದಾರೆ.

ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಇದರ ಮಂಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲಾ ಮದ್ಯ ಮಾರಾಟಗಾರರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮದ್ಯ ಮಾರಾಟಗಾರರ ಉಡುಪಿ ಸಮ್ಮೇಳನ- 20ನೇ ವರ್ಷದ ಸಂಭ್ರಮಾಚರಣೆ ಉಡುಪಿಯ ಹೋಟೆಲ್ ಶಾರದಾ ಇಂಟರ್ ನ್ಯಾಶನಲ್‍ನಲ್ಲಿ ನಡೆಯಿತು.

ಸಮಾವೇಶದಲ್ಲಿ ಅನೇಕ ನಿರ್ಣಯವನ್ನು ಕೈಗೊಳ್ಳಾಲಾಯಿತು. ಅನೇಕ ಭ್ರಷ್ಟ ಅಬಕಾರಿ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಯಿತು. ಬಜೆಟ್ ಪೂರ್ವಭಾವಿಯಾಗಿ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಬೇಕು. ಈ ಸಭೆಯಲ್ಲಿ ನಮ್ಮ ಸಮಸ್ಯೆಯನ್ನು ಆಲಿಸಬೇಕು. ಸಮಸ್ಯೆಗೆ ಪರಿಹಾರ ಕೊಡಬೇಕು ಎಂದರು.

ಈ ಬಗ್ಗೆ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾತನಾಡಿ, ಚಿಲ್ಲರೆ ಮದ್ಯ ಮಾರಾಟಗಾರರ ಲಾಭಾಂಶವನ್ನು ಹೆಚ್ಚಿಸಬೇಕು. ಶೇಕಡಾ 20 ಲಾಭಾಂಶವನ್ನು ಇದೀಗ ಸರ್ಕಾರ ಶೇಕಡಾ 10ಕ್ಕೆ ಕಡಿತಗೊಳಿಸಿದ್ದು ಹಿಂದಿನ ರೀತಿಯಂತೆ ಲಾಭಾಂಶವನ್ನು ನೀಡಬೇಕು. ಎಲ್ಲಾ ವರ್ಗದ ಸನ್ನದುದಾರರಿಗೆ ಏಕ ರೂಪದ ಸನ್ನದು ಶುಲ್ಕ ವಿಧಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯಲ್ಲಿ ಅಸೋಸಿಯೇಶನ್ ಅದ್ಯಕ್ಷ ಎಸ್. ಗುರುಸ್ವಾಮಿ, ಕೋಶಾಧಿಕಾರಿ ಮೆಹರ್ ವಾಡೆ, ಕರುಣಾಕರ್ ಹೆಗ್ಡೆ, ರಾಮಲು ಬಳ್ಳಾರಿ, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *