ಸತ್ತವರ ಬಗ್ಗೆ ಕುಮಾರಸ್ವಾಮಿಗೆ ಅನುಕಂಪ ಇದ್ಯೋ, ರಾಜಕೀಯ ಇದ್ಯೋ: ಡಿ.ಕೆ.ಸುರೇಶ್ ತಿರುಗೇಟು

Public TV
2 Min Read

ರಾಮನಗರ: ಕಾಲ್ತುಳಿತ ಪ್ರಕರಣದಲ್ಲಿ ಡಿಸಿಎಂ ಡಿಕೆಶಿಯದ್ದು ಡ್ರಾಮಾ ಕಣ್ಣೀರು ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿಕೆ ವಿಚಾರ ಕುರಿತು ರಾಮನಗರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ (D.K.Suresh) ತಿರುಗೇಟು ನೀಡಿದ್ದಾರೆ.

ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್ಫರ್ಟ್. ಅದು ಇಡೀ ರಾಜ್ಯದ ಜನರಿಗೆ ಗೊತ್ತು. ಯಾವ ಸಂದರ್ಭದಲ್ಲಿ ಯಾವ ರೀತಿ ಡ್ರಾಮಾ ಆಡಬೇಕು, ವಿಷಯಗಳನ್ನ ಯಾವ ರೀತಿ ತಿರುಚಬೇಕು ಅನ್ನೋದು ಗೊತ್ತಿದೆ. ಅವರಿಗೆ ಸತ್ತವರ ಬಗ್ಗೆ ಅನುಕಂಪ ಇದ್ಯೋ, ರಾಜಕೀಯ ಇದ್ಯೋ.! ಅವರು ಯಾವತ್ತೂ ಸತ್ತವರ ಮೇಲೆ ರಾಜಕಾರಣ ಮಾಡಿಕೊಂಡು ಬೆಳೆದು ಬಂದವರು. ಅವರಿಗೆ ಯಾವತ್ತೂ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಗೌರವ ಇಲ್ಲ. ಇವತ್ತೂ ರಾಜಕೀಯಕ್ಕಾಗಿ ಆರೋಪ ಮಾಡ್ತಿದ್ದಾರೆ. ಸರ್ಕಾರದ ಕಾರ್ಯಕ್ರಮ ಇದ್ದಿದ್ದರಿಂದ ಡಿಕೆಶಿ ಅಲ್ಲಿ ಹೋಗಿದ್ರು. ವಿಧಾನಸೌದದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಕಾಲ್ತುಳಿತ ಆಗಿದೆ ಅಂತ ಗೊತ್ತಾಯ್ತು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮ ವೈಂಡಪ್ ಮಾಡಿಸೋಕೆ ಹೋಗಿದ್ರು. ಬಳಿಕ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಲಾಗಿದೆ. ರಾಜಕೀಯವಾಗಿ ಏನೋ ಹೇಳಬೇಕು ಕುಮಾರಸ್ವಾಮಿ ಹೇಳ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಈ ರಾಜ್ಯದ ಸಿಎಂ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಗ್ಬೇಕು – ಆಯುಕ್ತರಿಗೆ ಗದರಿದ್ದಕ್ಕೆ ಭದ್ರತೆ ಎಂದ ಹೆಚ್‌ಡಿಕೆ

ಪ್ರಕರಣದಲ್ಲಿ ಸಿಎಂ ಎ1, ಡಿಸಿಎಂ ಎ2 ಮಾಡಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಮಾತನಾಡಿ, ವಿಜಯೇಂದ್ರಗೆ ಹೇಳಿ ಮೊದಲು ಮೋದಿ ಹಾಗೂ ಅಮಿತ್ ಶಾರನ್ನ ಎ1, ಎ2 ಮಾಡಲಿ. ಪ್ರಯಾಗರಾಜ್‌ನಲ್ಲಿ ನಡೆದ ಘಟನೆಗೆ ಎ1, ಎ2 ಮಾಡಿ. ಕುಮಾರಸ್ವಾಮಿ ಇದರ ನೈತಿಕ ಹೊಣೆ ಹೊರ್ತಾರಾ? ಎಲ್ಲಿ ಏನೇ ಆದ್ರೂ ಡಿ.ಕೆ.ಶಿವಕುಮಾರ್ ಮಾತ್ರ ಕಾರಣ. ಡಿಕೆಶಿ ಟಾರ್ಗೆಟ್ ಮಾಡೋದು ಬಿಟ್ರೆ ಅವರಿಗೆ ಬೇರೆ ಏನೂ ಗೊತ್ತಿಲ್ಲ. ಡಿಕೆಶಿ ಒಬ್ಬರೇ ಎಲ್ಲರಿಗೂ ಕಾಣೋದು. ಯಾವ ಕಾರಣಕ್ಕೆ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಮಾಧ್ಯಮದವರು ಹುಡುಕಿ ಎಂದರು.

ಈ ದುರಂತಕ್ಕೆ, ಸಾವು-ನೋವಿಗೆ ಎಲ್ಲರೂ ಕಾರಣ. ಎಲ್ಲರೂ ಈ ವಿಚಾರಕ್ಕೆ ತಲೆತಗ್ಗಿಸಬೇಕಿದೆ. ಇದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ಪೆಹಲ್ಗಾಮ್‌ನಲ್ಲಿ ಆದ ದುರಂತ ಕೇಂದ್ರ ಸರ್ಕಾರದ ವೈಫಲ್ಯ ಅಲ್ವಾ? ಕುಮಾರಸ್ವಾಮಿ ಅವ್ರು ಪ್ರಧಾನಮಂತ್ರಿ, ಹೋಂ ಮಿನಿಸ್ಟರ್ ರಾಜೀನಾಮೆ ಕೇಳಿದ್ರಾ? ಹೌದು, ಅದು ಉಗ್ರರ ಅಟ್ಟಹಾಸ, ಅಮಾಯಕರು ಬಲಿಯಾದ್ರು‌. ಅದರಲ್ಲಿ ನಾವು ರಾಜಕೀಯ ಮಾಡಲಿಲ್ಲ, ವಿಪಕ್ಷಗಳು ಬೆಂಬಲ ಕೊಡಲಿಲ್ವಾ? ಈ ಕಾಲ್ತುಳಿತ ಪ್ರಕರಣ ಕೂಡಾ ಅನಿರೀಕ್ಷಿತ ಅವಘಡ. ಲಕ್ಷಾಂತರ ಜನರು ಒಂದೇ ಕಡೆ ಸೇರಿದ್ರೆ ಅನಿರೀಕ್ಷಿತ ಘಟನೆ ನಡೆಯೋದು ಸಹಜ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಾ.ರಾಜಕುಮಾರ್ ಅಂತ್ಯಕ್ರಿಯೆಯಲ್ಲಿ ಅವಘಡ ಆಯ್ತು. ಕುಮಾರಸ್ವಾಮಿ ಆಗ ರಾಜಿನಾಮೆ ಕೊಟ್ರಾ? ಆಗ ಅವಿತುಕೊಂಡು ಕೂತಿದ್ದರು. ಇದನ್ನ ಕುಮಾರಸ್ವಾಮಿ, ಅಶೋಕ್‌, ವಿಜಯೇಂದ್ರಗೆ ಕೇಳಿ. ಇದರಲ್ಲಿ ರಾಜಕೀಯ ಬಿಡಿ. ಲೋಪ ಆಗಿರೋದು ನಿಜ. ಅದನ್ನ ಸರಿಪಡಿಸೋದು ಸರ್ಕಾರದ ಜವಾಬ್ದಾರಿ. ಇದರಲ್ಲಿ ರಾಜಕೀಯ ಮಾಡುವವರಿಗೆ ತಿಳಿಹೇಳಬೇಕು ಎಂದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಳಿಗೆ ಒಂದೊಂದು ಕೋಟಿ ಪರಿಹಾರ ಕೊಡಬೇಕು – ಲಕ್ಷ್ಮಿ ಹೆಬ್ಬಾಳ್ಕರ್‌ ಆಗ್ರಹ

Share This Article