ಆಡಿಯೋ ಲೀಕ್ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳಿ- ಸಿಎಂಗೆ ಕತ್ತಿ ಮನವಿ

Public TV
2 Min Read

ಬೆಂಗಳೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಲೀಕ್ ಮಾಡಿದವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಉಮೇಶ್ ಕತ್ತಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇಂದು ಸಿಎಂ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್‌ವೈ ಅವರನ್ನು ಭೇಟಿಯಾದ ಕತ್ತಿ ಸುಮಾರು ಒಂದು ಗಂಟೆಗಳ ಕಾಲ ಜೊತೆ ಚರ್ಚೆ ನಡೆಸಿದರು. ಸಿಎಂ ಹಾಗೂ ಕತ್ತಿ ಚರ್ಚೆ ತೀವ್ರ ಕುತೂಹಲ ಮೂಡಿಸಿದ್ದು, ಆಡಿಯೋ ರೆಕಾರ್ಡ್ ಮಾಡಿದೋರು ಬೆಳಗಾವಿಯ ಅತೃಪ್ತ ಬಣ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿದೆ ಎನ್ನಲಾಗಿದೆ.

ಚರ್ಚೆಯ ವೇಳೆ ಆಡಿಯೊ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ನಮ್ಮ ಜಿಲ್ಲೆ ಬಗ್ಗೆ ಹೆಚ್ಚು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾರ ಕಡೆಯವರೇ ಆಗಲಿ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಉಮೇಶ್ ಕತ್ತಿ ಮನವಿ ಮಾಡಿದ್ದಾರೆ. ಅಲ್ಲದೆ ಅವರನ್ನು ಸುಮ್ಮನೆ ಬಿಡಬಾರದು ಎಂದು ಇದೇ ವೇಳೆ ಸಿಎಂ ಮೇಲೆ ಕತ್ತಿ ಒತ್ತಡ ಹಾಕಿದ್ದಾರೆ.

ಬೆಳಗಾವಿ ರಾಜಕೀಯ ಕಿತ್ತಾಟವೇ ಆಡಿಯೋ ಲೀಕ್ ಗೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕತ್ತಿ ಇಂದು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಆಡಿಯೋ ಲೀಕ್ ನಿಂದ ಬೆಳಗಾವಿ ಬಿಜೆಪಿಯಲ್ಲಿ ಮತ್ತಷ್ಟು ಫೈಟ್ ಹೆಚ್ಚಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

ಆಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
ಅ.26ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಬಿಎಸ್‌ವೈ, ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈಯಲ್ಲಿರಿಸಿದ್ದರು. ಅವರೆಲ್ಲರು ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನೂ ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ, ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೆ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹೇಳಿದ್ದರು.

ಸಿಎಂ ಅವರ ಈ ಆಡಿಯೋ ಅಕ್ಟೋಬರ್ 31ರಂದು ಲೀಕ್ ಆಗಿದ್ದು, ದೇಶದ್ಯಾಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಕಾಂಗ್ರೆಸ್ ಕೂಡ ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು ಎಂದು ಮಂಗಳವಾರ ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *