ಬಳ್ಳಾರಿಗೆ ಗೌಪ್ಯವಾಗಿ ಎಂಟ್ರಿ ಕೊಟ್ರು ಜನಾರ್ದನ ರೆಡ್ಡಿ – ಕುಟುಂಬಸ್ಥರ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ

Public TV
1 Min Read

– ಇತ್ತ ಜಾಮೀನು ಸಿಕ್ರೂ ವಿನಯ್ ಬಿಡುಗಡೆ ವಿಳಂಬ

ಬಳ್ಳಾರಿ: ಗಣಿ ಅಕ್ರಮದ ಪ್ರಮುಖ ಆರೋಪಿ, ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ ಕೊನೆಗೂ ಬಳ್ಳಾರಿಗೆ ಕಾಲಿಟ್ಟಿದ್ದಾರೆ. ಎರಡು ತಿಂಗಳ ಮಟ್ಟಿಗೆ ಬಳ್ಳಾರಿಯಲ್ಲಿ ಇರಲು ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗೌಪ್ಯವಾಗಿ ಬಳ್ಳಾರಿಯ ನಿವಾಸಕ್ಕೆ ಧಾವಿಸಿದ್ದಾರೆ.

ಕುಟುಂಬ ಸಮೇತ ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿರೋದು ಇದು ಮೂರನೇ ಬಾರಿ. ಜನಾರ್ದನ ರೆಡ್ಡಿ ಆಗಮನ ಕುಟುಂಬ ಸದಸ್ಯರ ಸಂಭ್ರಮಕ್ಕೆ ಕಾರಣವಾಗಿದೆ. ಈ ಸಂಭ್ರಮದಲ್ಲಿ ಪುತ್ರಿ ಬ್ರಹ್ಮಿಣಿ, ಆಪ್ತ ಆಲಿಖಾನ್ ಕೂಡ ಪಾಲ್ಗೊಂಡಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಷಯ ಎಂದರೇ ಜರ್ನಾದನ ರೆಡ್ಡಿ ಬಳ್ಳಾರಿಗೆ ಬಂದ್ರೂ ಉದ್ದೇಶಪೂರ್ವಕವಾಗಿ ಬೆಂಬಲಿಗರಿಂದ ದೂರ ಉಳಿದಿದ್ದಾರೆ. ಈ 8 ವಾರಗಳ ಅವಧಿಯಲ್ಲಿ ಜನಾರ್ದನ ರೆಡ್ಡಿ ಹೇಗಿರಲಿದ್ದಾರೆ ಎಂಬುದರ ಬಗ್ಗೆ ನಿಗಾ ಇಡಲಾಗುತ್ತದೆ. ಜನಾರ್ದನ ರೆಡ್ಡಿಯ ನಡವಳಿಕೆ ಆಧಾರದ ಮೇಲೆ, ಅವರಿಗೆ ಇಲ್ಲಿಯೇ ಇರಲು ಅನುಮತಿ ಸಿಗಲಿದೆ ಎಂಬ ವಿಶ್ವಾಸವನ್ನು ಸಹೋದರ, ಶಾಸಕ ಸೋಮಶೇಖರ ರೆಡ್ಡಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿಗಿಲ್ಲ ಬಿಡುಗಡೆ ಭಾಗ್ಯ

ಇತ್ತ ಯೋಗೀಶ್ ಗೌಡ ಹತ್ಯೆ ಕೇಸ್‍ನಲ್ಲಿ ನಿನ್ನೆಯೇ ಜಾಮೀನು ಸಿಕ್ಕಿದ್ರೂ ವಿನಯ್ ಕುಲಕರ್ಣಿಗೆ ಇಂದು ಜೈಲಿಂದ ಬಿಡುಗಡೆ ಆಗುವ ಭಾಗ್ಯ ಸಿಗಲಿಲ್ಲ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಜಾಮೀನಿನ ಆದೇಶ ಪ್ರತಿಯನ್ನು ಸ್ಪೀಡ್ ಪೋಸ್ಟ್ ನಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಿಸಲಾಗಿದೆ.

ಆದರೆ ಅದಿನ್ನೂ ಹಿಂಡಲಗಾ ಜೈಲನ್ನು ತಲುಪಿಲ್ಲ. ಹೀಗಾಗಿ ವಿನಯ್ ಕುಲಕರ್ಣಿ ಬಿಡುಗಡೆ ವಿಳಂಬವಾಗಿದೆ. ನಾಳೆ ವಿನಯ್ ಕುಲಕರ್ಣಿ ಜೈಲಿಂದ ಹೊರಬರೋದು ಹೆಚ್ಚು ಕಡಿಮೆ ಖಚಿತವಾಗಿದೆ. ವಿನಯ್ ಕುಲಕರ್ಣಿ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. ಜಾಮೀನು ಷರತ್ತುಗಳ ಪ್ರಕಾರ ಧಾರವಾಡಕ್ಕೆ ವಿನಯ್ ಕುಲಕರ್ಣಿ ಹೋಗುವಂತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *