ಕತ್ತಿ ನನಗೆ ಒಳ್ಳೆಯ ಸ್ನೇಹಿತ, ಆದ್ರೆ ಅವನೊಬ್ಬ ಬುದ್ದಿ ಇಲ್ಲದ ಅವಿವೇಕಿ: ಹೆಚ್.ಸಿ ಮಹಾದೇವಪ್ಪ

Public TV
2 Min Read

– ಮುರ್ಮು ಆಯ್ಕೆ ಮಾಡಿರೋದು ಸಾಮಾಜಿಕ ನ್ಯಾಯದ ಸಂಕೇತವಲ್ಲ

ಮೈಸೂರು: ಸಚಿವ ಉಮೇಶ್ ಕತ್ತಿ ನನಗೆ ಒಳ್ಳೆಯ ಸ್ನೇಹಿತ. ಆದರೆ ಅವನೊಬ್ಬ ಬುದ್ಧಿ ಇಲ್ಲದ ಅವಿವೇಕಿ. ಮಾಡೋದಕ್ಕೆ ಕೆಲಸ ಇಲ್ಲದೇ ಏನೇನೋ ಕೆರೆದುಕೊಳ್ಳುತ್ತಿದ್ದಾನೆ. ಅರಣ್ಯ ಇಲಾಖೆಯಂತ ಬಹುಮುಖ್ಯ ಖಾತೆ ಇದ್ದರೂ ಕೆಲಸ ಇಲ್ಲದಂತೆ ಇದ್ದಾನೆ ಎಂದು ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಇದ್ರೆ ಇಲ್ಲೇ ಆಗಲಿ. ಅದಕ್ಯಾಕೆ ಪ್ರತ್ಯೇಕ ರಾಜ್ಯ ಬೇಕು ನಿನಗೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿಲ್ಲ ಅಂದ್ರೆ ಅದಕ್ಕೆ ಹೊಣೆ ಯಾರಪ್ಪ..?, ಅವತ್ತಿನಿಂದ ಅಲ್ಲಿ ಅಧಿಕಾರದಲ್ಲಿ ಇರುವವರು ನೀವೇ ತಾನೆ. ಏನು ಆಗಿದೆ, ಏನೂ ಆಗಿಲ್ಲ ಎಂಬ ಪಟ್ಟಿ ನಿನ್ನ ಬಳಿಯೇ ಇರುತ್ತೆ ನೋಡಿಕೋ. ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ಸೃಷ್ಠಿಯಾಗಿದೆ. ಇದನ್ನು ಪದೇ ಪದೇ ಒಡೆಯುವ ಮಾತನಾಡಬೇಡಿ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಇಂತಹ ಬೇಜವಾಬ್ದಾರಿ ಕೂಗು ಶುರು ಮಾಡುತ್ತಾರೆ ಎಂದು ಕಿಡಿಕಾರಿದರು.

ಮೈಸೂರಿನ ಅಭಿವೃದ್ಧಿ ಚರ್ಚೆಗೆ ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಬರಲಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದರು. ನಾವು ಮಾಡಿರೋ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಏನೂ ಕೆಲಸ ಮಾಡದೇ ಬರೀ ಬೊಗಳೆ ಬಿಟ್ಟುಕೊಂಡು ಅವರು ಓಡಾಡುತ್ತಿದ್ದಾರೆ. ಬರಿ ಬೊಗಳೆ ಬಿಟ್ಟು ಓಡಾಡುವವರ ಜೊತೆ ಏನು ಚರ್ಚೆ ಮಾಡೊದು. ಅವರು ಏನಾದರೂ ಅಭಿವೃದ್ಧಿ ಮಾಡಿದ್ದರೆ ತಾನೆ ಚರ್ಚೆ ಮಾಡೋದು. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕೂತಿದ್ದಾರೆ. ನಾವು ಜಿಲ್ಲಾಸ್ಪತ್ರೆ ಕಟ್ಟದಿದ್ದರೆ ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಎಲ್ಲಿ ಮಲಗಿಸುತ್ತಿದ್ದರು. ಇಂತಹ ನೂರು ಕೆಲಸ ಮಾಡಿದ್ದೇವೆ ಎಂದು ಗುಡುಗಿದರು. ಇದನ್ನೂ ಓದಿ: ಮೋದಿಜೀ ಕೇಂದ್ರ ಸಚಿವರು ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಇದು ನಿಮ್ಮ ಕೀಳುಮಟ್ಟದ ರಾಜಕೀಯ: ಸಂಜಯ್ ರಾವತ್

ಇದೇ ವೇಳೆ ಪರಿಷ್ಕೃತ ಪಠ್ಯಕ್ರಮ ವಾಪಸ್ ಪಡೆಯುವುದಿಲ್ಲವೆಂಬ ಸರ್ಕಾರದ ನಿಲುವಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನಾಭಿಪ್ರಾಯಕ್ಕೆ ಈ ಸರ್ಕಾರ ಯಾವತ್ತೂ ಮನ್ನಣೆ ನೀಡಿಲ್ಲ. ಇದು ಕೋಮುವಾದದ ಅಫೀಮನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಇವರ ಉದ್ದೇಶ. ಇದಕ್ಕಾಗಿ ಯಾರ ಮಾತನ್ನೂ ಕೇಳುತ್ತಿಲ್ಲ. ಈ ಸರ್ಕಾರಕ್ಕೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಕನಕದಾಸರು ಯಾರ ಮೇಲೂ ಗೌರವ ಇಲ್ಲ. ಇದು ಪಠ್ಯಪರಿಷ್ಕರಣೆಯ ಮೂಲಕ ಮತ್ತೆ ಸಾಬೀತಾಗಿದೆ. ಬರಗೂರು ಸಮಿತಿ ತಪ್ಪು ಮಾಡಿಲ್ವಾ ಎಂದು ಇವರು ಈಗ ಹೇಳುವುದು ಸಮರ್ಥನೀಯವಲ್ಲ ಎಂದರು.

ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯದ ಸಂಕೇತವಲ್ಲ. ಪ್ರಧಾನಿ ಹುದ್ದೆ, ರಾಷ್ಟ್ರಪತಿ ಹುದ್ದೆ, ಮುಖ್ಯಮಂತ್ರಿ ಹುದ್ದೆಯನ್ನು ಜಾತಿಯಿಂದ ನೋಡುವುದೇ ಸಂವಿಧಾನಕ್ಕೆ ಮಾಡುವ ಅಪಮಾನ. ದ್ರೌಪದಿ ಮುರ್ಮು ಅವರು ಬಿಜೆಪಿಯಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಜಾತಿ ನೋಡಿ ಅವರಿಗೆ ಸ್ಥಾನಕೊಡುವುದಾದರೆ ಅದು ತಪ್ಪು. ಅವರ ಕಾರ್ಯ ವೈಖರಿ ನೋಡಿ ಸ್ಥಾನ ಕೊಡಬೇಕು. ಬಿಜೆಪಿ ಇದರಲ್ಲೂ ಜಾತಿ ನಮೂದಿಸುತ್ತಾ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ತಿಳಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *