ತೆನೆ ಹೊರಲು ರೆಡಿಯಾದ ಬಿಜೆಪಿ ಮಾಜಿ ಸಚಿವ -ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜೆಡಿಎಸ್ ಪ್ರಾಬಲ್ಯ

Public TV
3 Min Read

ಕಾರವಾರ: ಬಿಜೆಪಿಯ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಅಧಿಕೃತವಾಗಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರ ನೇತೃತ್ವದಲ್ಲಿ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಆನಂದ್ ಆಸ್ನೋಟಿಕರ್ ಕಾರವಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಜಿಲ್ಲೆಯ ಒಬ್ಬ ಪ್ರಭಾವಿ ನಾಯಕರಾಗಿದ್ದಾರೆ. ಈ ಹಿಂದೆಯೇ ಆನಂದ್ ಆಸ್ನೋಟಿಕರ್ ಬಿಜೆಪಿ ತೊರೆಯುವುದರ ಬಗ್ಗೆ ಕಾರ್ಯಕರ್ತರಿಗೆ ಸುಳಿವನ್ನು ನೀಡಿದ್ದರು. ಇಂದು ಬೆಂಗಳೂರಿನಲ್ಲಿ ದೇವೇಗೌಡರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆನಂದ್ ಆಸ್ನೋಟಿಕರ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಸಾಮಾನ್ಯವಾಗಿ ಜೆಡಿಎಸ್ ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿದೆ. ಈಗ ಕರಾವಳಿ ಭಾಗದಿಂದ ಪ್ರಭಾವಿ ನಾಯಕರು ಪಕ್ಷ ಸೇರ್ಪಡೆ ಆಗುತ್ತಿರುವದರಿಂದ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಇದನ್ನೂ ಓದಿ: ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಸೈಲ್ ಎದುರು ಸೋತ ಬಳಿಕ ಆನಂದ್ ಆಸ್ನೋಟಿಕರ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು. 2014ರ ಲೋಕಸಭಾ ಚುನವಾಣೆ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ, ಅನಂತ್‍ಕುಮಾರ್ ಹೆಗಡೆ ಪರ ಪ್ರಚಾರದಲ್ಲಿ ಆನಂದ್ ಆಸ್ನೋಟಿಕರ್ ಭಾಗಿಯಾಗಿರಲಿಲ್ಲ. ಸಹಜವಾಗಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಸ್ಥಳೀಯ ನಾಯಕರಲ್ಲಿ ಆಸ್ನೋಟಿಕರ್ ಬಗ್ಗೆ ಅಸಮಧಾನವಿತ್ತು.

ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಆನಂದ್ ಆಸ್ನೋಟಿಕರ್ ಎರಡು ತಿಂಗಳು ಹಿಂದೆ ರಾಜಕೀಯದಿಂದ ದೂರ ಉಳಿಯಲಿದ್ದೇನೆ ಎಂದು ಘೋಷಣೆಯನ್ನು ಮಾಡಿಕೊಂಡಿದ್ದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದ ಮೇರೆಗೆ ಬಿಜೆಪಿ ಟಿಕೆಟ್ ನೀಡಿದ್ರೆ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಅಂತಾ ನಿಲುವುನ್ನು ಬದಲಿಸಿಕೊಂಡಿದ್ದರು. ಇದನ್ನೂ ಓದಿ: ಬಳ್ಳಾರಿ ರಾಜಕಾರಣದಲ್ಲಿ ಶುರುವಾಗುತ್ತಾ ಜೆಡಿಎಸ್ ಪರ್ವ?

ಈ ಬಾರಿ ಚುನವಾಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಆನಂದ್ ಆಸ್ನೋಟಿಕರ್ ಹೈಕಮಾಂಡ್ ಬಾಗಿಲನ್ನು ತಟ್ಟಿ ಬಂದಿದ್ದು, ಆದ್ರೆ ಅದು ಸಫಲವಾಗಿಲ್ಲ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ನಾಲ್ಕೂವರೆ ವರ್ಷಗಳಿಂದ ದೂರ ಉಳಿದಿದ್ದರಿಂದ ಸ್ಥಳೀಯ ರಾಜಕೀಯ ಮುಖಂಡರಿಗೆ ಆನಂದ್ ಆಸ್ನೋಟಿಕರ್ ಬಗ್ಗೆ ಸಹಜವಾಗಿ ಅಸಮಾಧಾನ ಹೊಂದಿದ್ದಾರೆ. ಕೆಲವು ತಿಂಗಳ ಹಿಂದೆ ಈಶ್ವರಪ್ಪ ಮತ್ತು ಬಿಎಸ್‍ವೈ ನಡುವೆ ಮುಸುಕಿನ ಗುದ್ದಾಟದ ವೇಳೆ ಆನಂದ್ ಆಸ್ನೋಟಿಕರ್ ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಬಿಎಸ್‍ವೈ ಕೋಪಕ್ಕೆ ಕಾರಣವಾಗಿದೆ ಅಂತಾ ಹೇಳಲಾಗುತ್ತಿದೆ.

ಜೆಡಿಎಸ್‍ಗೆ ಬಂದಿದ್ದು ಹೇಗೆ?: ಬಿಜೆಪಿ ಹೈಕಮಾಂಡ್ ಬಳಿ ಟಿಕೆಟ್‍ಗಾಗಿ ಮನವಿ ಸಲ್ಲಿಸಿದ್ರೂ, ಆನಂದ್ ಆಸ್ನೋಟಿಕರ್ ಅಲ್ಲಿ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ವೇಳೆ ಹಳೆಯ ಗೆಳೆಯರಾದ ಮಧು ಬಂಗಾರಪ್ಪ ಜೆಡಿಎಸ್ ಗೆ ಆಹ್ವಾನಿಸಿದ್ದಾರೆ. ಈ ಹಿಂದೆ ಆನಂದ್ ಆಸ್ನೋಟಿಕರ್ ಅವರ ತಂದೆ ಮತ್ತು ದೇವೇಗೌಡರು ಅತ್ಯಂತ ನಿಕಟ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ ಅಸ್ನೋಟಿಕ್ ಜೆಡಿಎಸ್ ಸೇರ್ಪಡೆ ಸರಳವಾಗಿತ್ತು. ಇದನ್ನೂ ಓದಿ: ಮತ್ತಿಬ್ಬರು ಶಾಸಕರು ಜೆಡಿಎಸ್ ಗೆ ಗುಡ್‍ಬೈ?

ಬಿಜೆಪಿಯಲ್ಲಿ ಪೈಪೋಟಿ: ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಪಕ್ಷ ತೊರೆದ ಮೇಲೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಸದ್ಯ ಕಾರವಾರ ವಿಧಾನಸಭಾ ಕ್ಷೇತ್ರದಿಂದ ರೂಪಾಲಿ ನಾಯ್ಕ್, ನಾಗರಾಜ್ ನಾಯಕ್, ಮಾಜಿ ಎಂಎಲ್‍ಎ ಗಂಗಾಧರ್ ಭಟ್ ಮತ್ತು ಗಣಪತಿ ಉಳೇವಕರ್ ನಡುವೆ ಟಿಕೆಟ್‍ಗಾಗಿ ಪೈಪೋಟಿ ಏರ್ಪಟ್ಟಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ನಾಲ್ವರಲ್ಲಿ ರೂಪಾಲಿ ನಾಯ್ಕ್ ಮತ್ತು ನಾಗರಾಜ್ ನಾಯಕ್ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ಜೆಡಿಎಸ್‍ಗೆ ಏನು ಲಾಭ: ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್‍ಗೆ ಕರಾವಳಿಯಲ್ಲಿ ಪ್ರಬಲ ನಾಯಕತ್ವದ ಕೊರತೆಯನ್ನು ಆನಂದ್ ಆಸ್ನೋಟಿಕರ್ ದೂರ ಮಾಡಲಿದ್ದಾರೆ ಅಂತಾ ಎನ್ನಲಾಗಿದೆ. ಇನ್ನೂ ಹಾಲಿ ಶಾಸಕರಾಗಿರುವ ಸತೀಶ್ ಸೈಲ್ ವಿರುದ್ಧ ಮೂರು ಬಾರಿ ಶಾಸಕರಾಗಿರುವ ಆನಂದ್ ಆಸ್ನೋಟಿಕರ್ ನೇರಾನೇರ ಪೈಪೋಟಿ ಕೊಡಲಿದ್ದಾರೆ. ಇತ್ತ ಬಿಜೆಪಿಯಲ್ಲಿ ಸತೀಶ್ ಸೈಲ್ ಮತ್ತು ಆನಂದ್ ಆಸ್ನೋಟಿಕರ್ ವಿರುದ್ಧ ಸ್ಪರ್ಧಿಸಲು ನಾಯಕರ ಕೊರತೆಯಿದೆ. ಇದನ್ನೂ ಓದಿ: ಗೀತಾ ಶಿವರಾಜ್‍ಕುಮಾರ್ ಚುನಾವಣೆಗೆ ಸ್ಪರ್ಧಿಸ್ತಾರಾ?- ಸಹೋದರ ಮಧು ಬಂಗಾರಪ್ಪ ಹೇಳಿದ್ದು ಹೀಗೆ

ಒಟ್ಟಿನಲ್ಲಿ ಮುಂಬುರುವ ಚುನಾವಣೆಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆ ಉಂಟಾಗಲಿದೆ. ಮತದಾರ ಪ್ರಭು ಯಾವ ಪಕ್ಷಕ್ಕೆ ಜೈ ಎನ್ನಲಾಗಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *