ಲಕ್ನೋ: 2022ರಲ್ಲಿ ದೆಹಲಿಯಲ್ಲಿ ನಡೆದಿದ್ದ ಲಿವ್ ಇನ್ ಗೆಳತಿ ಶ್ರದ್ಧಾವಾಕರ್ (Shraddha walkar) ಹತ್ಯೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದ (Uttar Pradesh) ಬಾಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಮಾಜಿ ಸೈನಿಕ (Ex-Army Soldier) ಪತಿಯನ್ನ ಹತ್ಯೆ ಮಾಡಿದ್ದಲ್ಲದೇ ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50 ವರ್ಷದ ಮಹಿಳೆ, ಆಕೆಯ ಪ್ರಿಯಕರ ಮತ್ತು ಇಬ್ಬರು ಸಹಚರರನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಕೇಸ್?
ಉತ್ತರ ಪ್ರದೇಶದ ಬಹದ್ದೂರ್ ಪುರ ನಿವಾಸಿಯಾಗಿರುವ ಆರೋಪಿ ಮಹಿಳೆ ಮಾಯಾದೇವಿ ಪ್ರಿಯಕರ ಅನಿಲ್ ಯಾದವ್ ಜೊತೆ ಸೇರಿ ತನ್ನ ಮಾಜಿ ಸೈನಿಕ ಪತಿ ದೇವೇಂದ್ರ ಕುಮಾರ್‌ನನ್ನ ಹತ್ಯೆ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಇವರಿಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ಸತೀಶ್ ಯಾದವ್ ಮತ್ತು ಮಿಥಿಲೇಶ್ ಇಬ್ಬರು ಸಹಚರರನ್ನೂ ಬಂಧಿಸಲಾಗಿದೆ.
ಏನಾಗಿತ್ತು?
ಪೊಲೀಸರ ಮಾಹಿತಿ ಪ್ರಕಾರ, ಕಳೆದ ಮೇ 10 ರಂದು ಉತ್ತರ ಪ್ರದೇಶದ ಖರೀದ್ ಗ್ರಾಮದಲ್ಲಿ ಕತ್ತರಿಸಿದ ಶವ ಪತ್ತೆಯಾಗಿತ್ತು. ಒಂದು ಕಡೆ ಕೈ-ಕಾಲುಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿತ್ತು. 2 ದಿನಗಳ ನಂತರ ಹತ್ತಿರದ ಬಾವಿಯಲ್ಲಿ ತಲೆ, ಕೈಕಾಲುಗಳಿಲ್ಲದ ದೇಹ ಪತ್ತೆಯಾಗಿತ್ತು. ಆದ್ರೆ ಮೃತ ವ್ಯಕ್ತಿಯ ತಲೆ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಡೈವರ್‌ಗಳಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಇತ್ತ ಪತಿಯನ್ನ ಕೊಂದಿದ್ದ ಮಾಯಾದೇವಿ ಠಾಣೆಗೆ ಬಂದು ನಾಪತ್ತೆ ಆಗಿದ್ದಾರೆಂದು ದೂರು ನೀಡಿದ್ದಳು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಮಾಯಾದೇವಿ, ನನ್ನ ಪತಿ ಮಗಳನ್ನು ಕರೆದುಕೊಂಡು ಬರಲು ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು, ವಾಪಸ್ ಮನೆಗೆ ಬರಲಿಲ್ಲ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಅಂತ ಕಥೆ ಕಟ್ಟಿದ್ದಳು. ಆದ್ರೆ ಮೃತದೇಹ ಪತ್ತೆಯಾದ ನಂತರ ಅನುಮಾನಗೊಂಡ ಪೊಲೀಸರು ಮತ್ತೆ ಪತ್ನಿಯನ್ನ ವಿಚಾರಣೆಗೆ ಒಳಪಡಿಸಿದಾಗ ನಾಟಕ ಬಯಲಾಯಿತು.
ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಲ್ಲದೇ ಪತಿಯ ತಲೆಯನ್ನ ಘಾಘರ್ ನದಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.