ದಾವಣಗೆರೆಯಲ್ಲಿ ಏಕಾಏಕಿ 36 ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು

Public TV
2 Min Read

– ಪಾರ್ಕ್ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಕ್ರಮ

ದಾವಣಗರೆ: ನಗರದ (Davanagere) ರಾಮನಗರ ಕೈಗಾರಿಕಾ ಪ್ರದೇಶದಲ್ಲಿದ್ದ 36 ಮನೆಗಳನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ್ದಾರೆ.

2013-14ರಿಂದ ಪಾಲಿಕೆಯ ಪಾರ್ಕ್ ಜಾಗದಲ್ಲಿ ಜನ ಮನೆ ಕಟ್ಟಿಕೊಂಡಿದ್ದರು. ಅದು ಪಾಲಿಕೆಯ ಪಾರ್ಕ್ ಜಾಗ ಎಂದು 2018ರಲ್ಲಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ದೂರುದಾರರ ಹಾಗೂ ಮನೆ ಮಾಲೀಕರ ವಾದ ಆಲಿಸಿದ್ದ ನ್ಯಾಯಾಲಯ ಪಾಲಿಕೆ ಪಾರ್ಕ್ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರೋದು ಅಕ್ರಮ. ಆ ಮನೆಗಳನ್ನು ತಕ್ಷಣವೇ ತೆರವುಗೊಳಿಸಿ ಎಂದು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಡಾ.ಅಶ್ವಥ್ ಅಲ್ಲಿನ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಅಲ್ಲಿನ ನಿವಾಸಿಗಳು ಮನೆ ತೆರವು ಮಾಡದ ಕಾರಣ ಇಂದು (ಅ.11) ಬೆಳಗ್ಗೆ ಪೊಲೀಸರ ಬಿಗಿ ಬಂದೋಬಸ್ತ್‍ನಲ್ಲಿ ಮನೆ ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

ಮನೆ ತೆರವಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಒಂದೆರಡು ದಿನ ಅವಕಾಶ ಕೊಡಿ ನಾವೇ ಮನೆ ಖಾಲಿ ಮಾಡ್ತಿವಿ ಎಂದು ಗೊಗರೆದರು. ಕೆಲವರು ಜೆಸಿಬಿಗೆ ಅಡ್ಡ ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಅಲ್ಲಿನ ನಿವಾಸಿಗಳ ಪರವಾಗಿ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ಅಧಿಕಾರಿಗಳ ಕಾಲು ಹಿಡಿಯಲು ಮುಂದಾಗಿದ್ದರು. ಆದರೂ ಅಧಿಕಾರಿಗಳ ಮನಸ್ಸು ಕರಗದ ಹಿನ್ನೆಲೆ ಪ್ರತಿಭಟನೆ ನಡೆಸಲು ಮುಂದಾದಾಗಾ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ.

ನಿವಾಸಿಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ರು. ಪಾಲಿಕೆ ವತಿಯಿಂದ ನೀರು ಸೌಲಭ್ಯ ಕೂಡ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲ ವೋಟರ್ ಐಡಿ, ಪಡಿತರ ಕೂಡ ವಿತರಣೆ ಮಾಡುತ್ತಿದ್ದರು. ಆರಂಭದಲ್ಲೇ ಇದು ಪಾರ್ಕ್ ಜಾಗ ಅಂತ ಹೇಳಿದ್ರೆ ನಾವು ಮನೆಗಳನ್ನೇ ಕಟ್ಟುತ್ತಿರಲಿಲ್ಲ. ಮನೆಗಳನ್ನ ಕಟ್ಟಿಕೊಂಡ್ಮೇಲೆ ಅಧಿಕಾರಿಗಳು ಮತ್ತು ಕೆಲವರು ಬಂದು ಇದು ಪಾರ್ಕ್ ಜಾಗ ಅಂತ ತಗಾದೆ ತೆಗೆದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡ್ತಿವಿ. ಮನೆ ಖಾಲಿ ಮಾಡೋಕೆ ಸಮಯವಕಾಶ ನೀಡಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜನರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಬೂದಾಳ್ ರಸ್ತೆ ಹಾಗೂ ತುರ್ಚಘಟ್ಟ ಬಳಿ ಜಾಗ ಗೊತ್ತುಪಡಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿ ಹೋದ ಬಾಲಕ

Share This Article