ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಓಕೆ ಎಂದ ಕೇರಳ ಸರ್ಕಾರ

Public TV
3 Min Read

– 4 ಬಾರಿ ಅಭಿಪ್ರಾಯ ಬದಲಾಗಿದ್ದೇಕೆ ಎಂದು ಸುಪ್ರೀಂ ಪ್ರಶ್ನೆ
– ‘ಅಧಿಕಾರ ಬದಲಾದಂತೆ ಅಭಿಪ್ರಾಯಗಳೂ ಬದಲಾಗುತ್ತದೆ’
– ಸುಪ್ರೀಂ ಕೋರ್ಟ್ ಮುಂದೆ ಕೇರಳ ಸರ್ಕಾರ ಉತ್ತರ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಮಹಿಳೆಯರ ದೇಗುಲ ಪ್ರವೇಶದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ನಡೆದ ವಿಚಾರಣೆ ವೇಳೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತನ್ನ ಅಭಿಪ್ರಾಯ ತಿಳಿಸಿದೆ.

ಕೇರಳ ಸರ್ಕಾರ ನಾಲ್ಕನೇ ಬಾರಿ ತನ್ನ ನಿರ್ಧಾರವನ್ನು ಬದಲಾಯಿಸಿದೆಯಲ್ಲಾ ಎಂಬ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನೆಗೆ ಉತ್ತರಿಸಿದ ಕೇರಳ ಸರ್ಕಾರದ ಪರ ವಕೀಲರು, ಅಧಿಕಾರ ಬದಲಾದಾಗ ಸರ್ಕಾರದ ನಿರ್ಧಾರಗಳೂ ಬದಲಾಗುತ್ತವೆ ಎಂದು ಹೇಳಿದರು.

ಶಬರಿಮಲೆ ದೇಗುಲದಲ್ಲಿ ದೇವರ ಆರಾಧನೆಗೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ. ಹೀಗಿದ್ದಾಗ ಯಾವ ಆಧಾರದಲ್ಲಿ ಪ್ರವೇಶ ನಿಷೇಧಿಸುತ್ತೀರಿ. ರಾಜ್ಯ ಸರ್ಕಾರದ ಈ ನಡೆ ಸಂವಿಧಾನ ವಿರೋಧಿ. ಜನ ಸಾಮಾನ್ಯರಿಗೆ ದೇಗುಲ ತೆರೆದಾಗ ಅಲ್ಲಿಗೆ ಎಲ್ಲರೂ ಹೋಗುವಂತಾಗಬೇಕು. ಇಲ್ಲಿನ ಆಡಳಿತ ವರ್ಗ ಮಹಿಳೆಯರಿಗೆ ನಿಷೇಧ ಹೇರುತ್ತಿರುವುದು ಯಾಕೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ರೋಹಿಂಟನ್ ಫಾಲಿ ನಾರಿಮನ್, ನ್ಯಾ. ಎ.ಎಂ ಖಾನ್ವಿಲ್ಕರ್, ನ್ಯಾ. ಡಿವೈ ಚಂದ್ರಚೂಡ್ ಹಾಗೂ ನ್ಯಾ. ಇಂದು ಮಲ್ಹೋತ್ರಾ ಒಳಗೊಂಡ ಸಾಂವಿಧಾನಿಕ ಪೀಠ ಪ್ರಶ್ನಿಸಿತು.

ಪ್ರಾರ್ಥನೆ ಸಲ್ಲಿಸುವಾಗ ಪುರುಷರಿಗುವಷ್ಟೇ ಸಮಾನತೆ ಮಹಿಳೆಯರಿಗೂ ಇರುತ್ತದೆ. ಈ ಅವಕಾಶ ತಡೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾ. ಡಿ.ವೈ.ಚಂದ್ರಚೂಡ್ ಹೇಳಿದರು.

ಮಹಿಳೆಯರ ಋತುಸ್ರಾವದ ಕಾಲಘಟ್ಟ ಎಂದು 10ರಿಂದ 50 ವರ್ಷದವರೆಗಿನ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಆಮಿಕಸ್ ಕ್ಯೂರಿ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್, ಹೆಣ್ಣು ಮಕ್ಕಳಿಗೆ 10 ವರ್ಷಕ್ಕೂ ಮೊದಲೇ ಋತುಸ್ರಾವ ಆರಂಭವಾಗಬಹುದು. 50 ವರ್ಷದ ನಂತರವೂ ಇದು ಮುಂದುವರಿಯಬಹುದು ಎಂದು ಹೇಳಿದೆ. ದೇವಸ್ಥಾನ ಎನ್ನುವುದು ಯಾವತ್ತೂ ಖಾಸಗಿ ಸ್ವತ್ತಲ್ಲ. ಅದು ಸಾರ್ವಜನಿಕ ಆಸ್ತಿ. ಸಾರ್ವಜನಿಕ ಆಸ್ತಿಗೆ ಯಾರಿಗೆ ಯಾವಾಗ ಬೇಕಾದರೂ ಪ್ರವೇಶ ಮಾಡಬಹುದು ಎಂದು ಹೇಳಿದೆ.

ನಮಗೆ ಪೂಜೆ ಮಾಡಲು ಅವಕಾಶ ಬೇಡ, ನಮಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿ ಎಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ ಹ್ಯಾಪಿ ಟು ಬ್ಲೀಡ್ ಸಂಘಟನೆ ಕೋರ್ಟ್ ಮುಂದೆ ವಾದ ಮಂಡಿಸಿತು.

ಶಬರಿಮಲೆ ದೇಗುಲದಲ್ಲಿ ಮಹಿಳೆಯರಿಗೂ ಪ್ರಾರ್ಥನೆಗೆ ಅವಕಾಶ ನೀಡಬೇಕೆನ್ನುವುದು ಸರ್ಕಾರದ ಅಭಿಪ್ರಾಯ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಫಿಡವಿಟ್ ನಾವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?: ಕೇರಳದ ಶಬರಿಮಲೆ ದೇವಾಲಯದಲ್ಲಿ 800 ವರ್ಷಗಳಿಂದ ನಡೆದು ಬಂದಿರುವ ಮಹಿಳೆಯರ ಪ್ರವೇಶ ನಿಷೇಧ ಆಚರಣೆಯನ್ನು ವಿರೋಧಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರ, ದೇವಾಲಯ ಆಡಳಿತ ಮಂಡಳಿ, ಪತ್ತನಂತಿಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.

ಅರ್ಜಿದಾರರ ಪರ ಸಲಹೆಗಾರ ಪ್ರಕಾಶ್ ಗುಪ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮಹಿಳೆಯರ ದೇವಾಲಯದ ಪ್ರವೇಶದ ಬಗ್ಗೆ ತಾರತಮ್ಯ ತೋರುವುದು ಹಿಂದೂ ಧರ್ಮದ ಭಾಗವಲ್ಲ. ಯಾವುದೇ ಮಹಿಳೆಯ ನೋಟದಿಂದ ಯಾರ ಬ್ರಹ್ಮಚರ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಅದ್ದರಿಂದ ಅಂತಹ ಆಚರಣೆಗಳಿಗೆ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕು. 15ನೇ ವಿಧಿ ಧರ್ಮ, ಜಾತಿ, ಲಿಂಗ ಅಥವಾ ಸ್ಥಳದ ಆಧಾರ ಮೇಲೆ ಅಸಮಾನತೆ ತೋರುವಂತಿಲ್ಲ. 17ನೇ ವಿಧಿ ಅಸ್ಪೃಶ್ಯತೆಯನ್ನು ಆಚರಣೆ ಮಾಡುವುದನ್ನು ನಿಷೇಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *