ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

Public TV
1 Min Read

ರಾಮನಗರ: ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಬಿಡದಿ ಪೊಲೀಸ್ ಇನ್ಸ್ ಪೆಕ್ಟರ್ ಶಂಕರ್ ನಾಯಕ್ (Bidadi Poli Inspector Shankar Nayak) ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯಲ್ಲಿ ಹಣ ದುರುಪಯೋಗ ಮಾಡಿಕೊಂಡು ಅನೇಕ ಭ್ರಷ್ಟಾಚಾರ ಮಾಡಿರುವ ಆರೋಪದಡಿ ಬಿಡದಿ ಇನ್ಸ್ ಪೆಕ್ಟರ್ ಶಂಕರ್ ನಾಯಕ್ ಮೇಲೆ ಎಫ್‍ಐಆರ್ ದಾಖಲಾಗಿದೆ.

ಇತ್ತ ಶಂಕರ್ ನಾಯಕ್ ವಿರುದ್ಧ ಮಾಗಡಿಯ ಮಾಜಿ ಶಾಸಕ ಎ.ಮಂಜುನಾಥ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಮನಗರದಲ್ಲಿ (Ramagara) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಶಂಕರ್ ನಾಯಕ್ ಹಿಂದೆ ರೈಸ್ ಪುಲ್ಲಿಂಗ್ ಹಾಗೂ ಇಸ್ಪೀಟ್ ದಂಧೆ ಮಾಡುತ್ತಿದ್ದ. ಕುದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅನೇಕ ಭ್ರಷ್ಟಾಚಾರ (Corruption) ಮಾಡಿದ್ದಾನೆ. ಅಮಾಯಕರನ್ನ ಹೆದರಿಸಿ ಹಣ ವಸೂಲಿ ಮಾಡಿದ್ದಾನೆ. 80 ಲಕ್ಷ ಹಣ ಕೊಟ್ಟು ಬಿಡದಿಗೆ ವರ್ಗಾವಣೆ ಮಾಡಿಸಿಕೊಂಡಿದ್ದೇನೆ ಎಂದು ಸಿಬ್ಬಂದಿಗೆ ಹೆದರಿಸ್ತಿದ್ದಾನೆ. ನಾಗರಭಾವಿ, ರಾಜರಾಜೇಶ್ವರಿ ನಗರದಲ್ಲಿ ಜಮೀನು ಮಾಡಿದ್ದಾನೆ. 15 ಕೋಟಿ ವೆಚ್ಚದಲ್ಲಿ ಬೃಹತ್ ಬಂಗಲೆ ಕಟ್ಟಿಸುತ್ತಿದ್ದಾನೆ. ಇದೀಗ ಬಿಡದಿಗೆ ಬಂದು ಇನ್ನೂ ಎರಡು ತಿಂಗಳುಗಳು ಸಹ ಕಳೆದಿಲ್ಲ ಮತ್ತೆ ತನ್ನ ಭ್ರಷ್ಟಾಚಾರ ಮುಂದುವರಿಸಿದ್ದಾನೆ ಎಂದು ಎ.ಮಂಜುನಾಥ್ ದೂರಿದ್ದಾರೆ.

ಇನ್ಸ್ ಪೆಕ್ಟರ್ ಶಂಕರ್ ನಾಯಕ್ ಮೇಲೆ ಎಫ್‍ಐಆರ್ ದಾಖಲಾಗಿದ್ರೂ ಆತ ಸ್ಟೇಷನ್ ಬಂದು ಕೆಲಸ ಮಾಡ್ತಿದ್ದಾನೆ. ಒಬ್ಬ ಅಧಿಕಾರಿ ವಿರುದ್ಧ ಎಫ್‍ಐಆರ್ ಆದ್ರೂ ಸಸ್ಪೆಂಡ್ ಮಾಡಿ ತನಿಖೆ ಮಾಡುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿಲ್ಲ. ಈತನಿಗೆ ರಾಜಕೀಯ ನಾಯಕರ ರಕ್ಷಣೆ ಇದೆ. ಈ ಕೂಡಲೇ ಆತನನ್ನ ಸಸ್ಪೆಂಡ್ ಮಾಡಬೇಕು. ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬಿಡದಿ ಠಾಣೆ ಎದುರು ಕೂತು ಹೋರಾಟ ಮಾಡ್ತೀನಿ. ಜೊತೆಗೆ ಲೋಕಾಯುಕ್ತಕ್ಕೆ ದೂರು ಕೊಡ್ತೀನಿ ಎಂದು ಮಾಜಿ ಶಾಸಕರು ಕಿಡಿಕಾರಿದ್ದಾರೆ.

Share This Article