ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಹಿಂದುಳಿದ ವರ್ಗ, ಮುಸ್ಲಿಮರು, ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ: ಪಿಎಫ್‍ಐ

Public TV
2 Min Read

ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ವರ್ಗದವರು, ಮುಸ್ಲಿಮರು ಮತ್ತು ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ. ಅವರ ಏಳಿಗೆಗಾಗಿ ಮತ್ತು ಸಮಾನ ಹಕ್ಕಿಗಾಗಿ ಪಿಎಫ್‍ಐ ಹೊಸ ಚಳುವಳಿಯನ್ನೇ ರೂಪಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ನಡೆದ ಯುನಿಟಿ ಮಾರ್ಚ್ ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವಗಳ ಉಳಿವಿಗೆ ಮತ್ತು ದಮನಿತರ ಧ್ವನಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಾಚರಿಸುತ್ತಿದೆ. ಅಧಿಕಾರಶಾಹಿಗಳ ದಮನಕಾರಿ ನೀತಿ ಮತ್ತು ತಾರತಮ್ಯ ನೀತಿಯಿಂದಾಗಿ ಸಮಾಜದಲ್ಲಿ ಶೋಷಣೆಗೊಳಗಾಗಿರುವ ಜನರಲ್ಲಿ ಆತ್ಮವಿಶ್ವಾಸ ಮತ್ತು ಭದ್ರತೆಯನ್ನು ತುಂಬುವುದೇ ನಮ್ಮ ಧ್ಯೇಯ. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಅದರ ವಿರುದ್ಧ ಜನಪರವಾದ ಹೋರಾಟ ನಡೆಸುವ ಕಾರಣ ಪಿಎಫ್‍ಐ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅವರು ಹೇಳಿದರು.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳ ರಾಜ್ಯ ಕಾರ್ಯದರ್ಶಿ ಶಫೀಕ್ ಅಲ್ ಖಾಸಿಮಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವನ್ನಾಗಿ ಭಾರತವನ್ನು ಕಟ್ಟುವುದೇ ಪಿಎಫ್‍ಐ ಉದ್ದೇಶ. ಸರ್ಕಾರಗಳ ಯಾವುದೇ ದಮನಕಾರಿ ನೀತಿ ವಿರುದ್ಧ ಎದೆಯೊಡ್ಡಿ ಹೋರಾಟ ನಡೆಸುವ ಕಾರಣ ಪಿಎಫ್‍ಐ ಅಂದ ಕೂಡಲೇ ಆಡಳಿತ ಶಾಹಿಗಳಿಗೆ ಭಯ ಉಂಟಾಗುತ್ತಿದೆ ಎಂದು ಹೇಳಿದ್ರು.

ಪಿಎಫ್‍ಐ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮೈಸೂರು, ಅಬ್ದುಲ್ ಲತೀಫ್ ಪುತ್ತೂರು, ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ಕೋಶಾಧಿಕಾರಿ ಫಾರೂಖ್ ರಹ್ಮಾನ್ ಮೈಸೂರು, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ನಸೀಮಾ ಫಾತಿಮಾ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ದಲಿತ ಮುಖಂಡ ಆನಂದ ಮಿತ್ತಬೈಲು, ಸುಳ್ಯ ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಪಿಎಫ್‍ಐ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಪುತ್ತೂರು, ಅನ್ವರ್ ಸಾದತ್, ರಾಜ್ಯ ಕಾಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ, ಪ್ರಮುಖರಾದ ಮಹಮ್ಮದ್ ವಳವೂರು, ಅತಾವುಲ್ಲಾ ಜೋಕಟ್ಟೆ, ಮಮ್ಮಾಲಿ ಹಾಜಿ, ರಫೀಕ್ ದಾರಿಮಿ, ಅಬ್ದುಲ್ ಕಲಾಂ ಸುಳ್ಯ, ಶಿಹಾಬ್, ರಿಯಾಸ್ ಫರಂಗಿಪೇಟೆ, ಮಹಮ್ಮದ್ ತಫ್ಸೀರ್, ಅಮೀನ್ ಮೋಸಿಂ, ಅಮೀನ್ ಸೇಠ್, ಅಫ್ಸರ್ ಕೊಡ್ಲಿಪೇಟೆ, ಜಾಫರ್ ಸಾಧಿಕ್ ಫೈಝಿ ಉಪಸ್ಥಿತರಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಅಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಸ್ವಾಗತಿಸಿ, ಸಂಶುದ್ದೀನ್ ವಂದಿಸಿದ್ದು, ಎ. ಕೆ.ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *