– ದ.ಕೊರಿಯಾದಲ್ಲೂ ಬೋಯಿಂಗ್ ವಿಮಾನಗಳ ಫ್ಯುಯೆಲ್ ಕಂಟ್ರೋಲ್ ಸ್ವಿಚ್ ಪರಿಶೀಲನೆ
ಅಬುಧಾಬಿ: ಏರ್ ಇಂಡಿಯಾ (Air India) ವಿಮಾನ ಅಪಘಾತದ ಬಳಿಕ, ದುಬೈನ (Dubai) ಇತಿಹಾದ್ ಎರ್‌ಲೈನ್ಸ್ (Etihad Airlines) ಬೋಯಿಂಗ್ 787 (Boeing 787) ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕ್‌ಗಳನ್ನು ಪರಿಶೀಲಿಸಲು ಮುಂದಾಗಿದೆ. ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಲಾಕಿಂಗ್ ಫ್ಲೀಟ್-ವೈಡ್ ತಪಾಸಣೆಗೆ ವಿಮಾನಯಾನ ಸಂಸ್ಥೆ ಆದೇಶಿಸಿದೆ. ಅಲ್ಲದೇ ಪೈಲಟ್‌ಗಳಿಗೆ ಇಂಧನದ ಸ್ವಿಚ್ ನಿರ್ವಹಿಸುವಾಗ ಜಾಗ್ರತೆವಹಿಸುವಂತೆ ಸೂಚಿಸಲಾಗಿದೆ.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘RUN’ ನಿಂದ ‘CUTOFF’ ಸ್ಥಾನಕ್ಕೆ ಬಂದಿತ್ತು ಎಂದು AAIB ವರದಿ ಬಹಿರಂಗಪಡಿಸಿದೆ. ಇದು ವಿಮಾನದ ಎಂಜಿನ್ ಒತ್ತಡ ಕಳೆದುಕೊಳ್ಳಲು ಕಾರಣವಾಯಿತು. ಈ ಬಗ್ಗೆ ಪೈಲಟ್‌ಗಳ ಸಂಭಾಷಣೆ ಬ್ಲಾಕ್ ಬಾಕ್ಸ್‌ನಲ್ಲಿ ರೆಕಾರ್ಡ್ ಆಗಿದ್ದು, ನೀವು ಇಂಧನದ ಸ್ವಿಚ್ ಏಕೆ ಆಫ್ ಮಾಡಿದ್ದೀರಿ ಎಂದು ಸಹಪೈಲಟ್ ಕೇಳಿದ್ದು ದಾಖಲಾಗಿದೆ. ಅಲ್ಲದೇ ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ಪೈಲಟ್ ನಾನು ಆಫ್ ಮಾಡಲಿಲ್ಲ ಎಂದಿದ್ದರು. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ
ಇದೀಗ ಈ ವರದಿ ಬಿಡುಗಡೆಯಾದ ಬಳಿಕ ಇತಿಹಾದ್ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕಿಂಗ್ ಕಾರ್ಯವಿಧಾನಗಳ ಫ್ಲೀಟ್-ವೈಡ್ ತಪಾಸಣೆಗೆ ಪ್ರತ್ಯೇಕ ಎಂಜಿನಿಯರಿಂಗ್ ಬುಲೆಟಿನ್‌ನ್ನು ಸಹ ಬಿಡುಗಡೆ ಮಾಡಲಾಗಿದೆ.
2018ರಲ್ಲಿ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನವೀಕರಣ ಸಲಹೆ ಹೊರಡಿಸಿದ ಬಳಿಕ ಇತಿಹಾದ್ ಈ ಕ್ರಮ ಕೈಗೊಂಡಿದೆ. ಈ ಮೂಲಕ ಬೋಯಿಂಗ್ ವಿಮಾನಗಳ ನಿರ್ವಾಹಕರಿಗೆ ಇಂಧನ ನಿಯಂತ್ರಣ ಸ್ವಿಚ್‌ಗಳ ಮೇಲಿನ ಲಾಕಿಂಗ್ ಕಾರ್ಯವಿಧಾನಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಏರ್ ಇಂಡಿಯಾ ಈ ಸಲಹೆಯ ಮೇಲೆ ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂದು ಇತಿಹಾದ್ ತನ್ನ ವರದಿಯಲ್ಲಿ ಹೇಳಿದೆ.
ದಕ್ಷಿಣ ಕೊರಿಯಾದ (South Korea) ರಸ್ತೆ, ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯ (MOLIT) ಬೋಯಿಂಗ್ 787 ವಿಮಾನಗಳನ್ನು ನಿರ್ವಹಿಸುವ ಎಲ್ಲಾ ಕೊರಿಯನ್ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಸ್ವಿಚ್ ಕಾರ್ಯವಿಧಾನ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಘೋಷಿಸಿದೆ. ಏರ್ ಇಂಡಿಯಾ ಅಪಘಾತದ ಬಳಿಕ ಮತ್ತು 2018ರ FAA ಸುರಕ್ಷತಾ ವರದಿಯ ಎಚ್ಚರಿಕೆಯ ಶಿಫಾರಸುಗಳಿಗೆ ಅನುಗುಣವಾಗಿ ಈ ಪರಿಶೀಲನೆಗೆ ಸೂಚಿಸಲಾಗುತ್ತಿದೆ. ಇದನ್ನೂ ಓದಿ: Ahmedabad Plane Crash | ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ AAIB