ಟೇಕಾಫ್ ಆದ 6 ನಿಮಿಷಕ್ಕೆ ಪತನ : ವಿಮಾನ ದುರಂತಕ್ಕೆ 157 ಮಂದಿ ಬಲಿ

Public TV
1 Min Read

ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದಾರೆ. ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ.

ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೊಫ್ಟು ಬಳಿ ವಿಮಾನ ಪತನಗೊಂಡಿದೆ. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿದೆ. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ಈ ಬಗ್ಗೆ ಏರ್ ಲೈನ್ಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 8 ಮಂದಿ ಸಿಬ್ಬಂದಿ 147 ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737-8 ಮ್ಯಾಕ್ಸ್ ಹೆಸರಿನ ವಿಮಾನ ಪತನವಾಗಿದೆ. ಬೆಳಗ್ಗೆ 8.40ರ ವೇಳೆಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ವಿಮಾನ ಅವಘದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ಇತ್ತ ಶನಿವಾರ ಕೊಲಂಬಿಯಾದ ಮೆಟಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ವಿಮಾನ ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೊಲಂಬಿಯಾ ಸಿವಿಲ್ ಎರೋನಾಟಿಕ್ಸ್ ವಿಶೇಷ ಆಡಳಿತ ಮಂಡಳಿ ವಿಭಾಗ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ ಡಿಸಿ-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವಿನ ಮೆಟಾ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಮಾನ ಹಾರಾಟ ವೇಳೆ ಎಂಜಿನ್ ಫೇಲ್ ಆದ ಪರಿಣಾಮ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *