ಜಿಲ್ಲಾಧಿಕಾರಿ ಜೊತೆ ವಿದ್ಯಾರ್ಥಿನಿ ರೌಂಡ್ಸ್- ಡಿಸಿ ಆಡಳಿತ ವೈಖರಿ ಪರಿವೀಕ್ಷಣೆ

Public TV
3 Min Read

ಚಿಕ್ಕಬಳ್ಳಾಪುರ: ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿನಿ ಇಡೀ ದಿನ ಜಿಲ್ಲಾಧಿಕಾರಿಗಳ ಜೊತೆಗೆ ಆಡಳಿತ ಕಾರ್ಯವೈಖರಿ ಪರಿವೀಕ್ಷಣೆ ನಡೆಸಿದ ಅಪರೂಪದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ? ನಿತ್ಯ ಏನೆಲ್ಲ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿರುತ್ತಾರೆ ಎಂಬ ಕೌತುಕ ಬಹುತೇಕರಲ್ಲಿ ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಅವಕಾಶ ಸಿಗುವುದಿಲ್ಲ, ಇದರಿಂದ ಬೆಳಗ್ಗಿನಿಂದ ಸಂಜೆ ತನಕ ಅಧಿಕಾರಿಗಳ ಕಾರಿನಲ್ಲಿ ಓಡಾಡಿ, ವಿವಿಧ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಎಲ್ಲವನ್ನೂ ಆಲಿಸಿ, ನೋಟ್ಸ್ ಮಾಡಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಿ.ಎಮ್.ಪಲ್ಲವಿ ತೀರ್ಥ ಅವರು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಜೊತೆಯಲ್ಲಿದ್ದು, ಅವರ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಜಿಲ್ಲಾಧಿಕಾರಿಯೊಂದಿಗೆ ಆಡಳಿತವನ್ನು ಹತ್ತಿರದಿಂದ ಕಂಡರು.

ಅಂದಹಾಗೆ ಜಿಲ್ಲಾ ಕೌಶಲ್ಯ ದಿನಾಚರಣೆಯ ಅಂಗವಾಗಿ ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು 8 ರಿಂದ 12ನೇ ತರಗತಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಮತ್ತು ಸಾಮಥ್ರ್ಯಗಳ ಮೇಲೆ ಕೇಂದ್ರೀಕೃತವಾದ ಉನ್ನತ ಶಿಕ್ಷಣ ಬಗ್ಗೆ ಮರುಚಿಂತನೆ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ (ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಬಿ.ಎಮ್.ಪಲ್ಲವಿ ತೀರ್ಥ ಅವರು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟಾರೆ 21 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜೇತರಾದ ವಿದ್ಯಾರ್ಥಿಗಳಿಗೆ ಕೌಶಲ್ಯಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಡಿ ಭಾಗವಹಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಬಿ.ಎಮ್.ಪಲ್ಲವಿ ತೀರ್ಥ ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಾರ್ಯ ಚಟುವಟಿಕೆಗಳಲ್ಲಿ ಜೊತೆಯಲ್ಲಿದ್ದರು. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಪಲ್ಲವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿ ಬರೆದ ಪ್ರಬಂಧವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪತ್ರ ಹಾಗೂ ಕೌಶಲ್ಯ ಕೈಪಿಡಿ ಪುಸ್ತಕವನ್ನು ನೀಡಿ ಅಭಿನಂದಿಸಿದರು.

ಯುವಜನರಲ್ಲಿ ಕೌಶಲ್ಯ ಹೆಚ್ಚಿಸುವುದು ಮುಖ್ಯ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಕೌಶಲ್ಯಾಭಿವೃದ್ಧಿ, ವಿಜೇತರಾದ ವಿದ್ಯಾರ್ಥಿಗಳಿಗೆ ಕೌಶಲ್ಯಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಯವರ ಕಾರ್ಯವೈಖರಿ ಹತ್ತಿರದಿಂದ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ನಿರ್ದೇಶನದಂತೆ ಮಾರ್ಗದರ್ಶನ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕಲ್ಪಿಸಿಕೊಡುವುದು ಕೂಡ ಉತ್ತಮ ಕಾರ್ಯವಾಗಿದೆ ಎಂದರು.

ಐಎಎಸ್ ಅಧಿಕಾರಿಯಾಗುವ ಗುರಿ: ಇಂದು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಅವರ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತಮ ಅಧಿಕಾರಿಯಾಗಿ ಸಮಾಜಸೇವೆ ಆಗುವ ಗುರಿಯನ್ನು ಹೊಂದಿದ್ದೇನೆ ಎಂದಿ ಬಿ.ಎಮ್.ಪಲ್ಲವಿ ತೀರ್ಥ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಪಲ್ಲವಿ ಭಾಗಿಯಾದ ಸರ್ಕಾರಿ ಕಾರ್ಯಕ್ರಮಗಳು: ಮೊದಲಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿ, ಸರ್ಕಾರಿ ಯೋಜನೆಗಳು ಹಾಗೂ ಸವಲತ್ತುಗಳ ಕುರಿತು ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ನೀಟ್ ಪರೀಕ್ಷೆ: ಒಳಉಡುಪು ಕಳಚಿಡುವಂತೆ ಒತ್ತಾಯಿಸಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅನುಮತಿ

ತದ ನಂತರ ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ, ದೇವಿಶೆಟ್ಟಿಹಳ್ಳಿ, ಯಲುವಳ್ಳಿ ಗ್ರಾಮದಲ್ಲಿ ಏರ್ಪಡಿಸಿರುವ ವಿವಿಧ ಕಾಮಗಾರಿಗಳಿಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಶಂಕುಸ್ಥಾಪನೆ ಮಾಡಿದರು. ಈ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ವಿದ್ಯಾರ್ಥಿನಿ ಪಲ್ಲವಿ ಭಾಗಿಯಾಗಿ ಸರ್ಕಾರಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಿಳಿದುಕೊಂಡರು. ನಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಪಡಿಸುವ ವೇಳೆಯಲ್ಲಿ ಭಾಗಿಯಾಗಿದ್ದರು.

ಪಲ್ಲವಿ ಇವರು, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗೂ ನಾರಾಯಣಮ್ಮ ಅವರ ಪುತ್ರಿಯಾಗಿರುವ ಇವರು, ಪ್ರಸ್ತುತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ (ವಿಜ್ಞಾನ ವಿಭಾಗ)ದಲ್ಲಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಧಿಕಾರ ದುರ್ಬಳಕೆ, ಕಾನೂನು, ಶಿಷ್ಟಾಚಾರ ಉಲ್ಲಂಘನೆ ಆರೋಪ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *